ಜನರ ಜೀವ ಹಿಂಡುತ್ತಿವೆ ಗುಂಡಿಗಳು !

7-DVD-1
ದೇವದುರ್ಗ ತಾಲೂಕು ಮುಂಡರಗಿಯಲ್ಲಿ ನಿರ್ಮಿಸಿದ ಸಿಸಿ ರಸ್ತೆ ಹಾಳಾಗಿ ಗುಂಡಿ ಬಿದ್ದಿರುವುದು.
Published on

ದೇವದುರ್ಗ: ತಾಲೂಕಿನ ಅಮರಾಪುರ ಕ್ರಾಸ್‌ನಿಂದ ಮುಂಡರಗಿಗೆ ಸಂಪರ್ಕಿಸುವ 8ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಮುಂಡರಗಿ ಗಣಜಲಿವರೆಗೆ 2ಕಿಮೀ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಜೀವ ಹಿಂಡುತ್ತಿವೆ.

ಚಿಂಚರಕಿಯಿಂದ ಅಮರಾಪುರವರೆಗೆ ಸುಮಾರು 22ಕಿಮೀ ರಸ್ತೆ ಹಲವು ವರ್ಷಗಳ ಹಿಂದೆಯೇ ರಾಜ್ಯ ಹೆದ್ದಾರಿಯಾಗಿದೆ. ಚಿಂಚರಕಿಯಿಂದ ಗಲಗವರೆಗೆ ದ್ವಿಪಥ ರಸ್ತೆಯನ್ನು ಅಭಿವೃದ್ಧಿ ಮಾಡಲಾಗಿದೆ. ಗಲಗನಿಂದ ಅಮರಾಪುರ ಕ್ರಾಸ್‌ವರೆಗೆ 12ಕಿಮೀ ರಸ್ತೆ ಹಲವು ವರ್ಷಗಳ ಹಿಂದೆ ಹಾಳಾಗಿದೆ. ಕಳೆದ ವರ್ಷ ಗಲಗನಿಂದ ದೇವತಗಲ್‌ವರೆಗೆ 3ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಈ ವರ್ಷ ದೇವದಗಲ್‌ನಿಂದ ಗಣಜಲಿ ಗ್ರಾಮದವರೆಗೆ 2ಕಿಮೀ ರಸ್ತೆ ಡಾಂಬರ್ ಮಾಡಲಾಗಿದೆ. ಆದರೆ, ಗಣಜಲಿಯಿಂದ ಅಮರಾಪುರವರೆಗೆ ರಸ್ತೆ ಅಭಿವೃದ್ಧಿ ಕಂಡಿಲ್ಲ.

ಅಮರಾಪುರ ಕ್ರಾಸ್‌ನಿಂದ ಅರಕೇರಾ, ಹಟ್ಟಿ, ಕವಿತಾಳ, ಸಿರವಾರಗೆ ಮಾರ್ಗವಿದ್ದು ಸದರಿ ರಸ್ತೆಯಲ್ಲಿ ನಿತ್ಯ ಸಾರಿಗೆ ಬಸ್, ಟಿಪ್ಪರ್, ಲಾರಿಗಳ ಓಡಾಟ ಹೆಚ್ಚಿದೆ. ಅಮರಾಪುರ ಕ್ರಾಸ್‌ನಿಂದ ಅಮರಾಪುರ, ಗಾಜಲದಿನ್ನಿ ಕ್ರಾಸ್, ಮುಂಡರಗಿ, ಗಣಜಲಿವರೆಗೆ 8ಕಿಮೀ ರಸ್ತೆಯಿದ್ದು ಎಲ್ಲೆಂದರಲ್ಲಿ ಡಾಂಬರ್ ಕಿತ್ತುಹೋಗಿದೆ. ಅದರಲ್ಲೂ ಮುಂಡರಗಿಯಿಂದ ಗಣಜಲಿವರೆಗೆ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸಿಸಿ ರಸ್ತೆಯೂ ಹಾಳಾಗಿದೆ. ಎರಡು ಕಿಮೀ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಅಪಘಾತಗಳು ಮಾಮೂಲಿ ಎನ್ನುವಂತಿವೆ. ಅಲ್ಲದೇ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ನಿರ್ಮಿಸಲಾಗಿದೆ. ಇದರಿಂದ ಕಾರುಗಳು ಸೇರಿ ಲಘು ವಾಹನಗಳು ಸಂಚರಿಸಲು ಸರ್ಕಸ್ ಮಾಡಬೇಕಿದೆ.

ಜೆಇ, ಪಿಡಬ್ಲುೃಡಿ, ದೇವದರ್ಗುಶಿವಕುಮಾರ ನಾಯಕಅಮರಾಪುರ ಕ್ರಾಸ್‌ನಿಂದ ಚಿಂಚರಕಿವರೆಗಿನ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಮಾಡಲಾಗಿದೆ. ಮುಂಡರಗಿ, ಗಣಜಲಿ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಇರುವುದರಿಂದ ಬೇರೆ ಗುತ್ತಿಗೆದಾರರಿಗೆ ಟೆಂಡರ್ ಆಗಿದೆ. ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲು ಜೆಸ್ಕಾಂಗೆ ಪತ್ರ ಬರೆಯಲಾಗಿದೆ. ಮುಂಡರಗಿ ಗ್ರಾಮಸ್ಥನಂದೀಶ ನಾಡಗೌಡಮುಂಡರಗಿ ಅಮರಾಪುರ ಕ್ರಾಸ್ ರಸ್ತೆ ಸಂಪೂರ್ಣ ದಿವಾಳಿಯಾಗಿದೆ. ಅದರಲ್ಲಿ ಮುಂಡರಗಿಯಿಂದ ಗಣಜಲಿವರೆಗೆ ಸಿಸಿ ರಸ್ತೆ ಹಾಳಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ವಾಹನಗಳು ಇರಲಿ ಜನರೂ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ. ಅರೆಬರೆ ರಸ್ತೆ ಮಾಡಿದ್ದಾರೆ. ಮುಂಡರಗಿ ಗಣಜಲಿ ಜನರು ಸಮಸ್ಯೆ ಎದುರಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net