

ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದ್ದು, ಶನಿವಾರ ಧಾರಾಕಾರ ಮಳೆಯಿಂದಾಗಿ ಜನಸಂಚಾರ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿರುವ ಸೇತುವೆಗಳು, ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಬೆಳಗಾವಿ ತಾಲೂಕಿನ ಮಾರ್ಕಂಡೇಯ ಜಲಾಶಯಕ್ಕೆ ರಕ್ಕಸಕೊಪ್ಪದಿಂದ 3,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ, ಘಟಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಫಾಲ್ಸ್ ವ್ಯಾಪ್ತಿಯ ಸೇತುವೆಗಳು ಮುಳುಗಡೆಯಾಗಿವೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಮೋದಗಾ, ಶೆಟ್ಟಿಹಳ್ಳಿ ಗ್ರಾಮದ ನಾಲ್ಕು ಸೇತುವೆ ಶನಿವಾರ ಮುಳುಗಿದ್ದು, ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ನದಿ ದಡದ ರೈತರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಸೇತುವೆ ಮೇಲೆ ಜನ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಇಟ್ಟು ನಿಗಾವಹಿಸಿದ್ದಾರೆ. ಘಟಪ್ರಭಾ ನದಿ ತೀರದಲ್ಲಿ ಜಾನುವಾರು ಬಿಡಬಾರದು ಎಂದು ಸೂಚಿಸಲಾಗಿದೆ. ಹಲವು ರೈತರ ಹೊಲಗದ್ದೆಗೆ ನೀರು ನುಗ್ಗಿದ್ದರಿಂದ ಹೊಲಗಳಿಗೂ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ನದಿ ಆಚೆಗಿನ ರೈತರಿಗೆ ಹಾಗೂ ಶಾಲಾ ಮಕ್ಕಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸಲು ಬಸ್ ಸೌಕರ್ಯ ಒದಗಿಸಲಾಗಿದೆ.
ಖಾನಾಪುರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ತೀರದ ಕೃಷಿ ಜಮೀನುಗಳಲ್ಲಿ ನದಿಯ ನೀರು ನುಗ್ಗಿ ಗದ್ದೆಗಳು ಜಲಾವೃತಗೊಂಡಿವೆ. ಲೋಂಡಾ ಅರಣ್ಯ ವ್ಯಾಪ್ತಿಯ ಸಾತನಾಳಿ ಮತ್ತು ಮಾಚಾಳಿ ಗ್ರಾಮಗಳ ಬಳಿ ಸೇತುವೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ನದಿಗಳನ್ನು ಸೇರುವ ಹಳ್ಳ-ಕೊಳ್ಳಗಳಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಜನರ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕಿಸುವ ರಸ್ತೆಗಳ ಅಕ್ಕ-ಪ್ಪದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದೆ. ಬೆಳಗಾವಿ ತಾಲೂಕಿನ ದಾಮನೆ ಸೇರಿ ಇತರ ಗ್ರಾಮಕ್ಕೆ ತೆರಳುವ ರಸ್ತೆಯ ಅಕ್ಕ-ಪಕ್ಕದ ಮನೆಗಳು ನೀರಿನಲ್ಲಿ ನಿಂತಂತೆ ಭಾಸವಾಗುತ್ತಿದೆ.
ಕೃಷ್ಣಾ ನದಿಗೆ 81,208 ಕ್ಯೂಸೆಕ್ ನೀರು:
ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ 81,208 ಕ್ಯೂಸೆಕ್ ನೀರು ಶನಿವಾರ ಹರಿದುಬರುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಸುಮಾರು 2 ಅಡಿ ಏರಿಕೆ ಕಂಡಿದೆ. ಕೆಳಹಂತದ ಬ್ಯಾರೇಜ್‌ಗಳು ಮತ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಸುಳಕುಡ ಬ್ಯಾರೇಜ್‌ನಿಂದ ದೂಧಗಂಗಾ ನದಿಗೆ 19,000 ಕ್ಯೂಸೆಕ್ ಮತ್ತು ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 62,208 ಕ್ಯೂಸೆಕ್ ಸೇರಿ ಒಟ್ಟು 81208 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದುಬರುತ್ತಿವೆ. ಕೃಷ್ಣೆ ಹಾಗೂ ಉಪನದಿಗಳು ಇಂದು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಗದ್ದೆಗಳಿಗೆ ನೀರು ನುಗ್ಗಿದೆ. ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ ಮತ್ತು ಮಾಂಜರಿ-ಸವದತ್ತಿ ಕೆಳಹಂತದ ಹಳೆಯ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ.