

ಮಡಿಕೇರಿ:
ಕೊಡಗಿನ ಬಹುತೇಕ ಭಾಗಗಳಲ್ಲಿ ಪುನರ್ವಸು ಮಳೆ ಭಾನುವಾರ ಬೆಳಗ್ಗೆಯಿಂದಲೇ ಅಬ್ಬರಿಸಲು ಶುರುಮಾಡಿದೆ. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಂಗಳವಾರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿಯಲ್ಲಿ ಸೋಮವಾರ ಸಂಜೆಯ ಮಾಹಿತಿ ಪ್ರಕಾರ 2854.87 ಅಡಿಗಳಷ್ಟು ನೀರಿತ್ತು. ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದ್ದು, 17,180 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 6.359 ಟಿಎಂಸಿಗಳಷ್ಟು ನೀರಿನ ಸಂಗ್ರಹ ಇದೆ. ಭಾರಿ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟಿರುವುದರಿಂದ ಅಣೆಕಟ್ಟೆಯ ಕೆಳಪಾತ್ರದಲ್ಲಿ ಪ್ರವಾಹದ ಆತಂಕ ಕಾಣಿಸಿಕೊಂಡಿದೆ.
ಮಳೆ ಮತ್ತು ಗಾಳಿಗೆ ಜಿಲ್ಲೆಯ ವಿವಿಧೆಡೆ ಹಾನಿ ಸಂಭವಿಸಿದೆ. ಸೋಮವಾರಪೇಟೆ ಹೋಬಳಿ ನೇಗಳ್ಳಿ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಮನೆಯ ಛಾವಣಿ ಹಂಚುಗಳು ಮತು ಹಿಂಭಾಗದ ಗೋಡೆಗೆ ಪೂರ್ಣ ಹಾನಿಯಾಗಿದೆ.
ಕುಶಾಲನಗರ ತಾಲೂಕು ಕುಶಾಲನಗರ ಹೋಬಳಿ ಹೆಗ್ಗಡಳ್ಳಿ ಗ್ರಾಮದ ಲಕ್ಷ್ಮಿ ಎಂಬವರ ಮನೆಯ ಗೋಡೆ ಭಾಗಕ್ಕೆ ಹಾನಿಯಾಗಿದೆ. ಮಾದಾಪಟ್ಟಣ ಗ್ರಾಮದ ನಿವಾಸಿ ಬಸವರಾಜು ಎಂಬವರ ವಾಸದ ಮನೆಯ ಗೋಡೆಗೆ ಮಳೆಯಿಂದಾಗಿ ಹಾನಿಯಾಗಿದೆ. ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ ಹೋಬಳಿ ಮರಗೋಡು ಗ್ರಾಮದ ಎಂ.ಕೆ. ಅಣ್ಣು ಎಂಬವರ ವಾಸದ ಮನೆಗೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಮಡಿಕೇರಿ ತಹಸೀಲ್ದಾರ್ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ವೀಕ್ಷಿಸಿದರು. ಈ ಕುಟುಂಬವನ್ನು ಬೇರೊಂದು ಮನೆಗೆ ಸ್ಥಳಾಂತರಿಸಲಾಗಿದೆ. ಮರಗೋಡು ಗ್ರಾಮದ ಲಲಿತಾ ಎಂಬುವವರ ವಾಸದ ಮನೆ ಹಿಂಭಾಗದಲ್ಲಿ ಬರೆ ಕುಸಿದು ಹಾನಿ ಸಂಭವಿಸಿದೆ.
ಭಾಗಮAಡಲ ಹೋಬಳಿ ಬೆಟ್ಟತ್ತೂರು ಗ್ರಾಮದ ದೇವರಕೊಲ್ಲಿ ಎಂಬಲ್ಲಿ ಕುಡಿಯರ ಗೌರಮ್ಮ ಕರುಂಬಯ್ಯ ಎಂಬವರ ಮನೆ ಮೇಲೆ ಮರ ಬಿದ್ದು ಮನೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಭಾಗಮಂಡಲ-ತಲಕಾವೇರಿ ಮತ್ತು ಭಾಗಮಂಡಲ - ಸೂರ್ತಲೆಮನೆ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಆಗಿತ್ತು.
ಮಡಿಕೇರಿಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆ ನಗರಸಭಾ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಹಾನಿ ಆಗಿರುವ ಪ್ರದೇಶಗಳಿಗೆ ಪೌರಾಯುಕ್ತ ವಿಜಯ್ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಕಾವೇರಿ ಸೇರಿದಂತೆ ಇತರ ನದಿಗಳಲ್ಲೂ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಗ್ಗುಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಬಹುದಾದ ಆತಂಕ ಉಂಟಾಗಿದೆ.
ಹಾರAಗಿ ಅಣೆಕಟ್ಟೆಯಿಂದ ನದಿಗೆ ನೀರು ಬಿಟ್ಟಿರುವುದರಿಂದ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ತೂಗು ಸೇತುವೆ ಬಳಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಗಡಿಭಾಗದ ಕೊಪ್ಪ ಸೇತುವೆ ಬಳಿಯೂ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿ ಆಗಿದೆ.
ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಸ್ಥಳಕ್ಕೆ ತಾಲೂಕು ಕಾರ್ಮಿಕ ಅಧಿಕಾರಿ ಎಂ.ಎA. ಯತ್ನಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಮಳೆ ಬರುತ್ತಿರುವ ಸಂದರ್ಭದಲ್ಲಿ ಕಾರ್ಮಿಕರು ಕೆಲಸದ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಯಾವುದೇ ರೀತಿಯ ಅನಾಹುತ ಸಂಭವಿಸದAತೆ ಎಚ್ಚರಿಗೆ ವಹಿಸುವಂತೆ ತಿಳುವಳಿಕೆ ನೀಡಿದರು. ನಂತರ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 58.85 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.87 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1188.07 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 575.20 ಮಿ.ಮೀ. ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 88.25 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 48.25 ಮಿ.ಮೀ.,
ಪೊನ್ನಂಪೇಟೆ ತಾಲ್ಲೂಕಿನಲ್ಲಿ 33.02 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 76.85 ಹಾಗೂ ಕುಶಾಲನಗರ ತಾಲೂಕಿನಲ್ಲಿ 47.90 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 88.80, ನಾಪೋಕ್ಲು 55.20, ಸಂಪಾಜೆ 89, ಭಾಗಮಂಡಲ 120, ವಿರಾಜಪೇಟೆ 48, ಅಮ್ಮತ್ತಿ 48.50, ಹುದಿಕೇರಿ 34, ಶ್ರೀಮಂಗಲ 38, ಪೊನ್ನಂಪೇಟೆ 42, ಬಾಳೆಲೆ 18.09, ಸೋಮವಾರಪೇಟೆ ಕಸಬಾ 94.40, ಶನಿವಾರಸಂತೆ 46, ಶಾಂತಳ್ಳಿ 140, ಕೊಡ್ಲಿಪೇಟೆ 27, ಕುಶಾಲನಗರ 29.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 66.20 ಮಿ.ಮೀ.ಮಳೆಯಾಗಿದೆ.