ಫೆಂಗಲ್‌ಗೆ ಜನ ಜೀವನ ಅಸ್ತವ್ಯಸ್ತ

FotoJet (1)
Published on

 ಶಾಲಾ- ಕಾಲೇಜುಗಳಿಗೆ ಇಂದು ರಜೆ ಘೋಷಣೆ | ಸ್ತಬ್ಧಗೊಂಡ ವಹಿವಾಟು

 ರಾಮನಗರ : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಫೆಂಗಲ್‌ನಿಂದಾಗಿ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದಲೇ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಭಾನುವಾರ ಸಂಜೆ ತುಂತುರು ಹನಿಯಂತೆ ಆರಂಭಗೊಂಡ ಮನೆ ರಾತ್ರಿಯಾದಂತೆ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಸೋಮವಾರ ಜನ ಜೀವನ ಅಯೋಮಯವಾಗಿತ್ತು. ಸೋಮವಾರ ಇಡೀ ದಿನ ಸುರಿದ ಮಳೆ ಕಾರಣದಿಂದ ಮಾರುಕಟ್ಟೆ ಸೇರಿ ಇತರ ವಹಿವಾಟು ಬಹುತೇಕ ಸ್ತಬ್ಧಗೊಂಡಿತ್ತು. ಆಗೊಮ್ಮೆ ಈಗೊಮ್ಮೆ ಬಿಡುವು ಕೊಡುತ್ತಿದ್ದ ಮಳೆ ಮತ್ತೆ ಅಬ್ಬರಿಸುತಿತ್ತು.

ಜಿಲ್ಲೆಯಲ್ಲಿ ಸೋಮವಾರ ಮುಂಜಾನೆವರೆಗೆ ಒಟ್ಟು 28.6 ಮಿಮೀ ಮಳೆಯಾಗಿದೆ. ಈ ವೇಳೆಗೆ ವಾಡಿಕೆಯಂತೆ ಜಿಲ್ಲೆಯಲ್ಲಿ ಕೇವಲ 0.3 ಮಿ ಮೀ ಮಳೆಯಾಗಬೇಕಿತ್ತು. ಮಳೆ ಕೃಷಿ ಚಟುವಟಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಶಾಲೆಗಳಿಗೆ ರಜೆ

ಸೋಮವಾರ ಎಡೆ ಬಿಡದೆ ಮಳೆ ಸುರಿಯುತ್ತಿದ್ದ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದವು. ಆದರೆ ಕೆಲವು ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆ ಕಾಲೇಜುಗಳು ಗೊಂದಲದ ನಡುವೆ ಕೆಲಸ ನಿರ್ವಹಿಸಲು ಮುಂದಾದವು. ಆದರೆ, ಜಿಲ್ಲಾಡಳಿತದಿಂದ ಸೋಮವಾರ ಮಧ್ಯಾಹ್ನದವರೆಗೂ ರಜೆ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಅಂತಿಮವಾಗಿ ಮಳೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಹಾಗೂ ಹವಾಮಾನ ಇಲಾಖೆ ರಾಮನಗರ ಜಿಲ್ಲೆಗೆ ಮಂಗಳವಾರವೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದರಿಂದ ಸೋಮವಾರ ಮಧ್ಯಾಹ್ನ ಹಾಗೂ ಮಂಗಳವಾರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ರಜೆ ಘೋಷಣೆ ಮಾಡಿದರು.

ಜನರ ಪರದಾಟ

ರಾಜಧಾನಿ ಬೆಂಗಳೂರು ಸೇರಿ ವಿವಿಧ ಕಡೆಗಳಲ್ಲಿ ಉದ್ಯೋಗಕ್ಕೆ ತೆರಳುವ ಮಂದಿಗೆ ಮಳೆ ದೊಡ್ಡ ಆತಂಕವನ್ನೇ ತಂದೊಡ್ಡಿತು. ಕೆಲಸಕ್ಕೆ ಹೋಗಬೇಕು ಎಂದುಕೊಂಡಿದ್ದ ಮಂದಿ ಮಳೆಯಿಂದಾಗಿ ಕೆಲಸಕ್ಕೆ ಹೋಗದಂತೆ ಆಯಿತು. ರಸ್ತೆ ಬದಿ ವ್ಯಾಪಾರಿಗಳು ಸೇರಿ ಬಹುತೇಕ ಮಾರುಕಟ್ಟೆ ವ್ಯವಸ್ಥೆ ಮೇಲೂ ಮಳೆ ವ್ಯತಿರಿಕ್ತ ಪರಿಣಾಮ ಬೀರಿತು.

ರಸ್ತೆಗಳು ಸಂಪೂರ್ಣ ಹಾಳು

ಕುಡಿಯುವ ನೀರಿನ ಯೋಜನೆಗಾಗಿ ಈಗಾಗಲೇ ರಸ್ತೆಗಳನ್ನು ಅಗೆದ ಕಾರಣ ಗುಂಡಿ ಮಯವಾಗಿರುವ ರಾಮನಗರ ರಸ್ತೆಗಳು, ಸೈಕ್ಲೋನ್‌ನಿಂದಾಗಿ ಮತ್ತಷ್ಟು ಹಾಳಾದವು. ಪಾದಚಾರಿಗಳು ಇರಲಿ, ವಾಹನ ಸವಾರರು ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿ, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಶಪಿಸುತ್ತಾ ಓಡಾಡುತ್ತಿದ್ದುದು ಕಂಡು ಬಂತು.

ಬೆಳೆ ಹಾನಿ

ಮಳೆಯಿಂದಾಗಿ ಜಿಲ್ಲೆಯಲ್ಲಿ ಕೈಗೆ ಬಂದ ರಾಗಿ ಬೆಳೆ ಬಾಯಿಗೆ ಬರದಂತೆ ಆಗಿದೆ. ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಈಗ ಕಟಾವಿನ ಸಮಯವಾಗಿದ್ದು, ಮಳೆಯಾಗಿದ್ದು ಈಗಾಗಲೇ ಕೊಯ್ಲು ಮಾಡಿರುವ ರಾಗಿ ನೀರಿನಲ್ಲಿ ಮುಳುಗುವಂತಾಗಿದ್ದರೆ ಕೊಯ್ಲಿಗೆ ಬಂದ ರಾಗಿ ನೆಲ ಕಚ್ಚಿದೆ. ಮಳೆಯಲ್ಲಿ ನೆನೆಯುವ ರಾಗಿ ಹೊಲದಲ್ಲಿಯೇ ಮೊಳಕೆಯೊಡೆಯುವ ಸಾಧ್ಯತೆ ಇದ್ದು, ಇದು ರೈತರಿಗೆ ಭಾರಿ ನಷ್ಟ ಉಂಟು ಮಾಡಿದೆ.

ಮಾವಿಗೂ ತೊಂದರೆ

ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಮಾವು ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದರು. ಆದರೆ ಕಳೆದ ಕೆಲವು ದಿನಗಳಿಂದ ಇದ್ದ ಮೋಡ ಕವಿದ ವಾತಾವರಣ ಹಾಗೂ ಈಗ ಸುರಿಯುತ್ತಿರುವ ಮಳೆ ಮಾವಿನ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ವಾತಾವರಣ ಹೀಗೆ ಮುಂದುವರಿದರೆ ಮಾವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎನ್ನುವ ಆತಂಕ ಮಾವು ಬೆಳೆಗಾರರಲ್ಲಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net