

ಬೆಂಗಳೂರು ಗ್ರಾಮಾಂತರ: ನಿವಾರ್ ಚಂಡಮಾರುತದ ಪ್ರಭಾವ ಗ್ರಾಮಾಂತರ ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದು, ಗುರುವಾರ ಬೆಳಗಿನಿಂದಲೇ ಆರಂಭವಾದ ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಮೋಡಕವಿದ ವಾತಾವರಣದಿಂದಾಗಿ ಜಿಲ್ಲೆ ಮಲೆನಾಡಿನ ರೂಪ ಪಡೆದಿದ್ದು, ಕೆಲವು ಕಡೆಗಳಲ್ಲಿ ಬಿರುಸಿನ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳು, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳು ಬಿಕೋ ಎಂದ ದೃಶ್ಯ ಕಂಡುಬಂತು. ಹಲವು ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು, ಮಳೆ ಕಾರಣದಿಂದ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರಕ್ಕೆ ವಿರಾಮ ನೀಡಿದ್ದರು. ಕೊಡೆಗಳ ಆಸರೆ ಪಡೆದ ನೌಕರ ವರ್ಗ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರಯಾಸದಿಂದಲೇ ಹೊರಟಿದ್ದರು.
ರಾತ್ರಿ ವೇಳೆ ಜೋರು ಮಳೆ: ಮುಂಜಾನೆಯಿಂದ ಸುರಿಯುತ್ತಿದ್ದ ಜಡಿ ಮಳೆ ರಾತ್ರಿ ವೇಳೆಗೆ ತೀವ್ರತೆ ಪಡೆದುಕೊಂಡಿತ್ತು. ಮಳೆಯೊಂದಿಗೆ ರಭಸವಾಗಿ ಗಾಳಿ ಬೀಸಿದ್ದರಿಂದ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದರೆ, ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು.
ರೈತರ ಆತಂಕ ಇಮ್ಮಡಿ: ವಾರದ ಹಿಂದೆ ಸುರಿದ ಜಡಿ ಮಳೆಯಿಂದ ಕಟಾವಿಗೆ ಬಂದಿರುವ ರಾಗಿ ಸಲು ನಾಶವಾಗುವ ಆತಂಕ ಎದುರಿಸಿದ್ದ ಗ್ರಾಮಾಂತರ ಜಿಲ್ಲೆಯ ರೈತರು ನಿವಾರ್ ಚಂಡಮಾರುತದ ಪ್ರಭಾವದಿಂದ ಬೀಳುತ್ತಿರುವ ಜಡಿಮಳೆಗೆ ಮತ್ತಷ್ಟು ಆತಂಕಗೊಂಡಿದ್ದಾರೆ. ಜಡಿ ಮಳೆ ಹೀಗೆಯೇ ಮುಂದುವರಿದರೆ ರಾಗಿ ಸಲಿನ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದು ರೈತರ ಆತಂಕ ಇಮ್ಮಡಿಗೊಳಿಸಿದೆ. ಬಯಲು ಸೀಮೆ ಅತಿ ಮುಖ್ಯವಾದ ಬೆಳೆ ರಾಗಿ, ಈ ಬಾರಿ ದಾಖಲೆ ಬಿತ್ತನೆ ಜತೆಗೆ ನಿರೀಕ್ಷೆ ಮೀರಿ ಫಸಲು ಬಂದಿದೆ. ಆದರೆ ಚಂಡಮಾರುತ ಪ್ರಭಾವ ರೈತರನ್ನು ಕಂಗಾಲಾಗುವಂತೆ ಮಾಡಿದೆ.
ಜೀವನ ಸಂಪೂರ್ಣ ಅಸ್ತವ್ಯಸ್ತ: ಆನೇಕಲ್, ಚಂದಾಪುರ, ಅತ್ತಿಬೆಲೆ ಸೇರಿ ಹಲವೆಡೆ ಮಳೆ ಜತೆಗೆ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ಜನ ಮನೆಯಿಂದ ಹೊರ ಬರಲು ಸಾಧ್ಯವಾಗದೆ ಪರದಾಡಿದರು. ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ವಿರಳವಾಗಿದ್ದವು.