

ಹಳಿಯಾಳ: ಗುಡುಗು-ಸಿಡಿಲು, ಬಿರುಗಾಳಿಯೊಂದಿಗೆ ಭಾನುವಾರ ಸುರಿದ ಮಳೆಯಿಂದಾಗಿ ಪಟ್ಟಣದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಭಾನುವಾರ ವಾರದ ಸಂತೆಯ ದಿನವಾಗಿದ್ದು, ಮಳೆಯಿಂದಾಗಿ ಅಸ್ತವ್ಯಸ್ತವಾಯಿತು. ಬಿರುಗಾಳಿಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಲವೆಡೆ ಮರಗಳ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಮುರಿದು ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿರುವ ಶಾಸಕರ ಮಾದರಿ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಸವಣೂರು ಎಂಬುವವರ ಮನೆಗೆ ಚರಂಡಿ ನೀರು ನುಗ್ಗಿದ್ದು, ಕುಟುಂಬಸ್ಥರು ಪರದಾಡುವಂತಾಗಿದೆ. ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಲಭಿಸಬೇಕಿದೆ.