

ಹೊನ್ನಾವರ: ಜಾನಪದ ವಿಶ್ವ ಪ್ರತಿಷ್ಠಾನ ಹೊನ್ನಾವರ ಹಾಗೂ ಎಸ್ಡಿಎಂ ಕಾಲೇಜ್ನ ಕನ್ನಡ ವಿಭಾಗದ ಸಹಯೋಗದಲ್ಲಿ ‘ಜನಪದ ದೀಪಾರಾಧನೆ’ ಪ್ರಶಸ್ತಿ ಪ್ರದಾನ, ಸಾಕ್ಷ್ಯಚಿತ್ರ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ ಮಾ. 3ರಂದು ಬೆಳಗ್ಗೆ 10-30 ಗಂಟೆಗೆ ಪಟ್ಟಣದ ಎಸ್ಡಿಎಂ ಕಾಲೇಜ್ ಸಭಾಭವನದಲ್ಲಿ ನಡೆಯಲಿದೆ ಎಂದು ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂಘಟಕಿ ಸವಿತಾ ಉದಯ್ ಮಾತನಾಡಿ, ‘ಕುವೆಂಪು ದೀಪ’ ಪ್ರಶಸ್ತಿಯನ್ನು ರಂಗಭೂಮಿ ಕ್ಷೇತ್ರದ ಸಾಧಕ ಡಾ. ಶ್ರೀಪಾದ ಭಟ್ಟ ಹಾಗೂ ಶಿಕ್ಷಣ ಮತ್ತು ಪುಸ್ತಕ ಪ್ರಕಾಶನ ಕ್ಷೇತ್ರದ ಕೃಷ್ಣಮೂರ್ತಿ ಭಟ್ಟ ಹೊನ್ನಾವರ ಅವರಿಗೆ ಪ್ರದಾನ ಮಾಡಲಾಗುವುದು.
‘ಕಾರಂತ ದೀಪ’ ಪ್ರಶಸ್ತಿಯನ್ನು ಪರಿಸರ ಕ್ಷೇತ್ರದ ಶಿವಾನಂದ ಕಳವೆ ಶಿರಸಿ ಮತ್ತು ರಂಗಭೂಮಿ ಕ್ಷೇತ್ರದ ಶರಣ್ಯ ರಾಮಪ್ರಕಾಶ ಅವರಿಗೆ ಪ್ರದಾನ ಮಾಡಲಾಗುವುದು. ‘ದೇವಮ್ಮ ನಾಯಕ’ ಪ್ರಶಸ್ತಿಯನ್ನು ಬುಟ್ಟಿ ಹೆಣೆಯುವ ಯಶೋದಾ ಮರಾಠಿ ಅಂಕೋಲಾ ಮತ್ತು ಯುವ ಕೃಷಿಕ ಕಾರ್ತಿಕ ನಾಯಕ ಹಿಲ್ಲೂರು ಅವರಿಗೆ ಪ್ರದಾನ ಮಾಡಲಾಗುವುದು. ‘ವಿದ್ಯಾರ್ಥಿ ದೀಪ’ ಪ್ರಶಸ್ತಿಯನ್ನು ಕರಾಟೆ ಸಾಧಕ ಋತ್ವಿಕ್ ಮೇಸ್ತ ಅವರಿಗೆ ಪ್ರದಾನ ಮಾಡಲಾಗುವುದು. ಸಾಧಕರಿಗೆ ಡಾ. ಎನ್.ಆರ್. ನಾಯಕ ಮತ್ತು ಡಾ. ಶಾಂತಿ ನಾಯಕ ಪ್ರಶಸ್ತಿ ಪ್ರದಾನ ಮಾಡುವರು.
ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಅಪಗಾಲ ಅಭಿನಂದನಾ ಮಾತನಾಡುವರು. ಪ್ರಾಚಾರ್ಯ ಡಾ. ಡಿ.ಎಲ್. ಹೆಬ್ಬಾರ, ಇತರರು ಪಾಲ್ಗೊಳ್ಳುವರು. ಡಾ. ಎನ್.ಆರ್. ನಾಯಕ ದಂಪತಿಯ ಕ್ಷೇತ್ರಕಾರ್ಯದ ಕುರಿತು ಬೆಂಗಳೂರಿನ ಶರಣ್ಯ ರಾಮಪ್ರಕಾಶ ನಿರ್ವಣದ ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ. ಶ್ರೀಜಾ ಮತ್ತು ಸಂಗಡಿಗರಿಂದ ಗೀತಗಾಯನ ನಡೆಯಲಿದೆ. ಕೋಮಾರಪಂತರ ಜಾನಪದ ಪುಸ್ತಕ ಬಿಡುಗಡೆ ನಡೆಯಲಿದೆ. ಕೃತಿಯ ಕುರಿತು ಶ್ರೀಧರ ನಾಯಕ ಮಾತನಾಡುವರು ಎಂದು ಅವರು ತಿಳಿಸಿದರು. ಡಾ. ಶಾಂತಿ ನಾಯಕ ಇದ್ದರು.