ಸಮಾಜದ ಪ್ರಗತಿಗೆ ಜನರ ಶ್ರಮ ಅಗತ್ಯ

6 BKL 1
Published on

ಭಟ್ಕಳ: ಒಂದು ಸಮುದಾಯದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ಆ ಸಮಾಜದ ಜನರ ಶ್ರದ್ಧೆ ಮತ್ತು ಅವಿರತವಾದ ಪರಿಶ್ರಮ ಮಾತ್ರ ಎಂದು ಕರ್ನಾಟಕ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಡಿ. ನಾಯಕ ಹೇಳಿದರು.

ಮುರ್ಡೆಶ್ವರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕಿನ ನಾಡವರ ಸಮುದಾಯದ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ನಾಡವ ಸಮುದಾಯ ಚಿಕ್ಕ ಸಮುದಾಯವಾದರೂ ತಾವು ತೊಡಗಿಸಿಕೊಂಡ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆಯಿಂದ ದುಡಿದು ಮೇಲೆ ಬಂದಿದ್ದಾರೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೊಮ್ಮಯ್ಯ ಗಾಂವಕರ ಹಿತ್ತಲಮಕ್ಕಿ ಮಾತನಾಡಿ, ನಾಡವ ಸಮುದಾಯದ ಸ್ಥಿತಿವಂತರು ಯಾರೇ ಕಷ್ಟದಲ್ಲಿದ್ದರೂ ಅವರ ನೆರವಿಗೆ ಬರಬೇಕು ಎಂದರು.

ಉಡುಪಿ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ನಾಯಕ, ಭಟ್ಕಳ ನಾಡವರ ಸಂಘದ ಗೌರವ ಕಾರ್ಯದರ್ಶಿ ಸುರೇಶ ನಾಯಕ ಮಾತನಾಡಿದರು. ಭಟ್ಕಳ ನಾಡವರ ಸಂಘದ ಅಧ್ಯಕ್ಷ ಡಾ. ದಿನೇಶ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ಮಕ್ಕಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಘವೇಂದ್ರ ನಾಯಕ, ಬೊಮ್ಮಯ್ಯ ಗಾಂವಕರ, ನಾಗರಾಜ ನಾಯಕ, ಸುರೇಶ ನಾಯಕ, ಡಾ. ದಿನೇಶ ಗಾಂವಕರ, ಚಂದನಶ್ರೀ ನಾಯಕ, ವರೇಣ್ಯ ನಾಯಕ, ಶ್ರೇಯಸ್ ನಾಯಕ ಅವರನ್ನು ಸನ್ಮಾನಿಸಲಾಯಿತು.

ಭಾಗವತ ಬೊಮ್ಮಯ್ಯ ಗಾಂವಕರ ಅವರ ಭಾಗವತಿಕೆಯಲ್ಲಿ ರಂಗದ ಮೇಲೆ ಅರಳಿದ ಕಂಸವಧೆ ಯಕ್ಷಗಾನ ಪ್ರಸಂಗದ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತು. ಶ್ರೀಶಾ ಶಿವಕುಮಾರ ಪ್ರಾರ್ಥಿಸಿದರು. ನವೀನ ಗಾಂವಕರ ಸ್ವಾಗತಿಸಿದರು. ರೇಷ್ಮಾ ನಾಯಕ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಸಿಣ್ಣ ಗಾಂವಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net