

ಶಿಗ್ಗಾಂವಿ: ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಈಡೇರಿಸಿದೆ. ಜನಪರ ಸರ್ಕಾರವನ್ನು ಯಾವ ಶಕ್ತಿಯಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಹೆಣಗಳ ರಾಶಿಗಳ ಮೇಲೆ ರಾಜಕೀಯ ಮಾಡುವ ಬಿಜೆಪಿಗರಿಗೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ಐಟಿ, ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಆರೋಪಿಸಿದರು.
ಶಿಗ್ಗಾಂವಿ ಕ್ಷೇತ್ರಕ್ಕೆ ಹೈಕಮಾಂಡ್ ಆಯ್ಕೆ ಯಾರನ್ನೇ ಅಭ್ಯರ್ಥಿ ಮಾಡಿದರೂ, ಅವರಿಗೆ ಎಲ್ಲ ಆಕಾಂಕ್ಷಿಗಳು ಬೆಂಬಲ ಕೊಟ್ಟು ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಉಪ ಚುನಾವಣೆ ಟಿಕೆಟ್‌ಗೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಆದರೆ, ನಮಗೆ ಅಭ್ಯರ್ಥಿ ಮುಖ್ಯವಲ್ಲ. ಕಾಂಗ್ರೆಸ್ ಪಕ್ಷ ಮುಖ್ಯ. ಪ್ರಚಾರ ಸಮಿತಿ, ಪಕ್ಷದ ಹೈಕಮಾಂಡ್ ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸ್ಥಿತಿಗತಿ ಗಮನಿಸುತ್ತಿದೆ. ಸಮರ್ಥ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಿದೆ. ಬದಲಾದ ಕ್ಷೇತ್ರದ ರಾಜಕೀಯ ವಾತಾವರಣದಲ್ಲಿ ಇಲ್ಲಿನ ನಾಯಕರು ತಮ್ಮಲ್ಲಿರುವ ಅಸಮಾಧಾನ ಬದಿಗಿಡಬೇಕು. ಹಳೆಯ ತಪ್ಪನ್ನು ಮರೆತು ಪಕ್ಷದ ತತ್ವ-ಸಿದ್ಧಾಂತದಡಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಸಹಿಸುವುದಿಲ್ಲ. ಹಗಲಿನಲ್ಲಿ ಒಂದು ಪಕ್ಷ, ರಾತ್ರಿ ಒಂದು ಪಕ್ಷ ಬದಲಾಯಿಸುವ ದ್ರೋಹಿಗಳಿಗೆ ಕಾಂಗ್ರೆಸ್‌ನಲ್ಲಿ ಜಾಗ ಇಲ್ಲ. ಅಂಥವರು ಪಕ್ಷ ಹೊರ ಹಾಕುವ ಮೊದಲು ತಾವೇ ಹೊರ ಹೋದರೆ ಒಳ್ಳೆಯದು. ಒಳಗಿನ ದ್ರೋಹಿಗಳಿಂದಲೇ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಜಿಲ್ಲೆಯಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಲು ಮುಂದಾಗಬೇಕಿದೆ ಎಂದರು.
ಪಕ್ಷದ ಜಿಲ್ಲಾ ಉಸ್ತುವಾರಿ ಮಯೂರ ಜಯಕುಮಾರ ಮಾತನಾಡಿ, ಶಿಗ್ಗಾಂವಿ ಉಪಚುನಾವಣೆ ಮಹತ್ವದಾಗಿದೆ. ಈಗಾಗಲೇ ನಿಯೋಜನೆಗೊಂಡ ನಮ್ಮ ಬೂತ್ ಮಟ್ಟದ ಸದಸ್ಯರು ಪ್ರತಿ ಮನೆಗೂ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಮೂಲಕ ಪಕ್ಷ ಗೆಲ್ಲಿಸಲು ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ವಿನಯ ಕುಲಕರ್ಣ, ವಿನಯಕುಮಾರ್ ಸೊರಕೆ, ಶಾಸಕ ಶ್ರೀನಿವಾಸ ಮಾನೆ, ಎಚ್. ಆಂಜನೇಯ, ಎಸ್. ಆರ್. ಪಾಟೀಲ, ಬಸವರಾಜ ಶಿವಣ್ಣನವರ ಮಾತನಾಡಿದರು.
ಸೋಮಣ್ಣ ಬೇವಿನಮರದ, ರುದ್ರಪ್ಪ ಲಮಾಣಿ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ವಿನೋದ ಅಸೂಟಿ, ಟಿ. ಈಶ್ವರ, ವಸಂತ ವೈದ್ಯ, ಐ.ಜಿ. ಸನದಿ, ಶಾಕೀರ್ ಸನದಿ, ಆರ್. ಶಂಕರ, ವಿಜಯ ಮತ್ತಿಗಟ್ಟಿ, ರಾಜು ಕುನ್ನ್ನೂರ, ಸೈಯದ್ ಅಜೀಮ್‌ಪೀರ್ ಖಾದ್ರಿ, ಯಾಸೀರಖಾನ್ ಪಠಾಣ, ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ಸಿ.ಎಂ. ಪೈಜ್, ಸುಬಾನಿ ಚೂಡಿದಾರ, ಎಂ.ಎಂ. ಹೀರೆಮಠ, ಬಿ.ಸಿ. ಪಾಟೀಲ, ಎಂ.ಜೆ. ಮುಲ್ಲಾ, ಮಂಜುನಾಥ ಮನ್ನಣ್ಣನವರ, ಇತರರಿದ್ದರು.
ಕೇವಲ ತಂತ್ರಗಾರಿಕೆ, ಜನರನ್ನು ಒಡೆದಾಳುವ ಮೂಲಕ ಕ್ಷೇತ್ರ ಗೆಲ್ಲುತ್ತಿರುವ ಬಸವರಾಜ ಬೊಮ್ಮಾಯಿ, ನೀರಾವರಿ ಮೂಲಕ ಹಸಿರು ಸೀರೆ ಉಡಿಸುತ್ತೇನೆ. ಬಡವರ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿನ ಜನರನ್ನು, ರೈತರನ್ನು ಅಂಧಕಾರಕ್ಕೆ ದೂಡಿದ್ದಾರೆ. ನಾನು ಶಾಸಕನಾಗಿ ಮಾಡಿದ ಅಭಿವೃದ್ಧಿ, ನೀವು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು. ಸೋಲಿನ ಭಯದಿಂದ ಹಣ- ಹೆಂಡ ಹಂಚುವ ಮುರುಗೇಶ ನಿರಾಣಿ ಇಲ್ಲಿ ಅಭ್ಯರ್ಥಿ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ಸೋಲಿನ ಭಯದಲ್ಲಿರುವವರಿಗೆ ಕ್ಷೇತ್ರದ ಜನ ಪಾಠ ಕಲಿಸಲಿದ್ದಾರೆ ಎಂದರು.