

ಶಿರಸಿ: ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ರೀತಿಯ ಪಕ್ಷಗಳಾಗಿದ್ದು, ಜನತೆಯ ನಿರೀಕ್ಷೆ ಹುಸಿಗೊಳಿಸುತ್ತಿವೆ. ಜನತೆ ತೃತೀಯ ಪಕ್ಷವೊಂದರ ನಿರೀಕ್ಷೆಯಲ್ಲಿದ್ದಾರೆ ಎಂದು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಿಪಿಐಎಂ ಕಡೆ ಜನತೆ ಆಸಕ್ತಿ ತೋರುತ್ತಿದ್ದಾರೆ. ಜನತೆಯ ಆಶೋತ್ತರ ಈಡೇರಿಕೆ ಮತ್ತು ಅಭಿವೃದ್ಧಿ ಸಿಪಿಐಎಂನಿಂದ ಮಾತ್ರ ಸಾಧ್ಯ ಎಂದು ಜನತೆ ಹೇಳುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ 30 ಸಾವಿರ ಕುಟುಂಬ ನಮ್ಮ ಸಿದ್ಧಾಂತದ ಸಮೀಪದಲ್ಲಿದ್ದಾರೆ. ಅದನ್ನು ಮುಂದಿನ ಮೂರು ವರ್ಷದೊಳಗೆ ಒಂದು ಲಕ್ಷದತ್ತ ಕೊಂಡೊಯ್ಯಲು ಶ್ರಮಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಯಮುನಾ ಗಾಂವಕರ್ ಮಾತನಾಡಿ, ಉತ್ತರ ಕನ್ನಡದಲ್ಲಿ ಸಿಪಿಐ (ಎಂ) ಸಾಕಷ್ಟು ಜನಪರ ಹೋರಾಟ ನಡೆಸಿದೆ. ಪ್ರಸ್ತುತ ಜಿಲ್ಲಾ ಸಮಿತಿಯನ್ನು ಮರು ರಚಿಸಲಾಗಿದೆ. ಭವಿಷ್ಯದಲ್ಲಿ ಜನಪರ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪಕ್ಷದ ರಾಜ್ಯ ಸಮಿತಿಯ ಮೀನಾಕ್ಷಿ ಸುಂದರಂ, ಜಿಲ್ಲಾ ಸಮಿತಿಯ ನಾಗಪ್ಪ ನಾಯ್ಕ, ಸಿ.ಆರ್. ಶಾನಭಾಗ, ತಾಲೂಕು ಸಮಿತಿಯ ಮುತ್ತು ಪೂಜಾರಿ ಇತರರಿದ್ದರು.