ಉತ್ತಮ ಪರಿಸರ ಸೃಷ್ಟಿಗೆ ಜನರ ಸಹಕಾರ ಅಗತ್ಯ

30HDK0006
Published on

ಎಚ್.ಡಿ.ಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊಸಹೊಳಲು ಗ್ರಾಮದ ಕೆರೆ ಆವರಣದಲ್ಲಿ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಮೇಲ್ವಿಚಾರಕ ಬಿ.ಜೆ.ರಾಜು ಹೊಸಹೊಳಲು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಕಾರ ಮತ್ತು ಹೊಸಹೊಳಲು ಕೆರೆ ಸಮಿತಿಯ ಸಹಯೋಗದೊಂದಿಗೆ ಪೂರ್ಣಗೊಳಿಸಲಾಗಿದೆ. ಕೆರೆ ಆವರಣ ಸುತ್ತ ನೇರಳೆ, ಸಂಪಿಗೆ, ಹೊಂಗೆ, ಕಹಿ ಬೇವು, ಹೆಬ್ಬೇವು, ಅರಳಿ, ಬಿಟೆ, ನೆಲ್ಲಿಕಾಯಿ ಸಸಿಗಳನ್ನು ನೆಡಲಾಗಿದ್ದು, ಕೆರೆ ಸ್ವಚ್ಛತೆ ಮತ್ತು ಸಸಿಗಳ ಸಂರಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಒಂದು ಅರಳಿ ಮರ ಮತ್ತು ಒಂದು ಕೆರೆ ಊರಿನ ಎಲ್ಲ ಜನರ ಜೀವನ ನಡೆಸಲು ಸಹಕಾರಿ ಆಗುತ್ತದೆ. ಜತೆಗೆ ಉತ್ತಮ ಪರಿಸರ ಸೃಷ್ಟಿ ಆಗಬೇಕಾದರೆ ಜನರು ಕೈ ಜೋಡಿಸಬೇಕು ಎಂದರು.


ಪೀಪಲ್ ಟ್ರೀ ಸಂಯೋಜಕ ಜವರೇಗೌಡ ಮಾತನಾಡಿ, ಊರಿನ ಕೆರೆ ಆವರಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದರಿಂದ ಶುದ್ಧ ಗಾಳಿ ಪರಿಸರ ಕಾಣಬಹುದು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.


ವಲಯ ಮೇಲ್ವಿಚಾರಕಿ ಶಾಂತಾ, ಹೊಸಹೊಳಲು ಕೆರೆ ಸಮಿತಿ ಅಧ್ಯಕ್ಷ ಟಿ.ಮಂಜು, ಉಪಾಧ್ಯಕ್ಷ ಭೈರೇಗೌಡ, ಸದಸ್ಯರು ಟ್ರಾೃಕ್ಟರ್ ಮಂಜು, ರಮೇಶ್, ವೆಂಕಟೇಶ್, ಸೇವಾಪ್ರತಿನಿಧಿ ಪುಷ್ಪಾವತಿ, ಲಕ್ಷ್ಮೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net