

ಲೋಕಾಪುರ: ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ನ್ಯಾಯಸಮ್ಮತ, ಪಾರದರ್ಶಕವಾಗಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಸಹಾಯಕ ಚುನಾವಣಾ ನೋಂದಣಾಧಿಕಾರಿ ತಿಮ್ಮಣ್ಣ ಹುಲ್ಲುಮನಿ ಹೇಳಿದರು.
ಸಮೀಪದ ಭಂಟನೂರದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ವೇಳೆಯಲ್ಲಿ ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಇಂದಿನ ಯುಗದಲ್ಲಿ ಯುವ ಪೀಳಿಗೆ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ತಾಪಂ ಇಒ ವೀರನಗೌಡ ಐಗನಗೌಡರ ಮಾತನಾಡಿ, ಮತದಾನದಿಂದ ದೂರ ಉಳಿಯಲು ಕಾರಣ ಹಾಗೂ ಅವರಿಗೆ ಸಹಾಯ, ಸೌಲಭ್ಯಗಳ ಅಗತ್ಯತೆ ಇದೆಯೋ ಎಂಬುದನ್ನು ತಿಳಿದುಕೊಳ್ಳಲು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಮತದಾರರ ಮನೆ ಬಾಗಿಲು ಮತ್ತು ಗೋಡೆಗಳ ಮೇಲೆ ಸ್ಟೀಕರ್ ಅಂಟಿಸುವ ಮೂಲಕ ಮತದಾನದಂದು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿ, 18 ವರ್ಷ ಪೂರ್ಣಗೊಂಡ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು. ಮತದಾರರು ಮತದಾನದಿಂದ ಹೊರಗುಳಿಯಬಾರದು, ಪ್ರತಿಶತ ಮತದಾನದಿಂದ ಉತ್ತಮ ಸಮಾಜ ನಿರ್ಮಿಸಿ, ಮತದಾನಕ್ಕಿಂತ ಮತ್ತೊಂದಿಲ್ಲ, ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂಬ ಘೋಷವಾಕ್ಯಗಳನ್ನು ಮೊಳಗಿಸಲಾಯಿತು.
ಮತದಾನ ಜಾಗೃತಿ ಜಾಥಾದಲ್ಲಿ ಸೆಕ್ಟರ್ ಆಫೀಸರ್ ಮೋಹನ ಕೋರಡ್ಡಿ, ತಾಪಂ ಎಡಿಡಿಆರ್ ಎಚ್.ಎಸ್. ಕರೆಹೊನ್ನ, ಕಂದಾಯ ನಿರೀಕ್ಷಕ ಸತೀಶ ಬೇವೂರ, ಶಿಲ್ಪಶ್ರೀ ಟಿ.ಆರ್., ಪಿಡಿಒ ಗ್ರಾಪಂ ಭಂಟನೂರ, ಸಾಗರ ಪರಲಂಕಿ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಪಂಚಾಯಿತಿ, ಆಶಾ ಕಾರ್ಯಕರ್ತರು, ಅಂಗನವಾಡಿ, ಸಹಾಯಕರು, ಅಂಗವಿಕಲ ಪುನರ್‌ವಸತಿ ಕಾರ್ಯಕರ್ತರು, ಸ್ವಸಹಾಯ ಸಂಘದ ಮಹಿಳಾ ಸದಸ್ಯರು, ಭಂಟನೂರ ಗ್ರಾಮಸ್ಥರು ಇದ್ದರು.