

ರೋಣ: ಸಹಕಾರಿ ಸಂಘಗಳು ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಜನರಿಗೆ ಸಹಕಾರ ಸಂಘಗಳ ಬಗ್ಗೆ ಜಾಗೃತಿ ಮತ್ತು ತಿಳಿವಳಿಕೆ ಹೆಚ್ಚಬೇಕು. ಅವುಗಳ ಪ್ರಗತಿಗೆ ಸಾರ್ವಜನಿಕರು ಹಾಗೂ ರೈತರು ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ಅಧ್ಯಕ್ಷ ಜಿ.ಪಿ. ಪಾಟೀಲ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಗದಗ ಜಿಲ್ಲಾ ಸಹಕಾರ ಯುನಿಯನ್ ಸಹಕಾರ ಇಲಾಖೆ ಹಾಗೂ ಕೆಸಿಸಿ ಬ್ಯಾಂಕ್ ಧಾರವಾಡ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬಲಗೊಳ್ಳಬೇಕು ಅದಕ್ಕೆ ಪೂರಕವಾಗಿ ವಿವಿಧ ಸಂಘಟನಾತ್ಮಕ ಹಾಗೂ ಲಾಭದಾಯಕ ಕ್ರಮಗಳನ್ನು ಸಹಕಾರ ಸಂಘಗಳ ನೌಕರರು ಹಾಗೂ ಆಡಳಿತ ಮಂಡಳಿ ಸದಸ್ಯರು ಕೈಗೊಳ್ಳಬೇಕು. ದೇಶದ ಆರ್ಥಿಕತೆಗೆ ಸಹಕಾರ ಸಂಘದ ಕೊಡುಗೆ ಅಪಾರವಾಗಿದೆ. ಹೀಗಾಗಿ ಸಹಕಾರ ಸಂಘಗಳ ವ್ಯಾಪ್ತಿ ಮತ್ತು ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಎಂ. ಕವಟಗಿಮಠ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಎಚ್.ಜಿ.ಹಿರೇಗೌಡರ, ಶರಣಬಸಪ್ಪ ಜಿ. ಕಾಟ್ರಳ್ಳಿ, ನಿಂಗನಗೌಡ ಮರಿಗೌಡ್ರ, ಬಸವರಾಜ ಅರಬಗೊಂಡ, ಈರಣ್ಣ ಪಟ್ಟಣಶೆಟ್ಟಿ, ಬಾಪುಗೌಡ ಪಾಟೀಲ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎಂ. ಪಾಟೀಲ, ರೋಣ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ, ಇತರರಿದ್ದರು.