

ಚಿಕ್ಕಮಗಳೂರು: ಯಾವುದೇ ಒಂದು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಪ್ರತಿಯೊಬ್ಬರೂ ಸಹಕರಿಸಬೇಕು. ನೊಂದವರಿಗೆ ನ್ಯಾಯ ದೊರಕಿಸಲು ಜನಸ್ನೇಹಿ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ರಾಮನಹಳ್ಳಿ ಡಿಎಆರ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ನಗರ, ಬಸವನಹಳ್ಳಿ, ಮಹಿಳಾ, ಸಂಚಾರ, ಗ್ರಾಮಾಂತರ, ಆಲ್ದೂರು ಮತ್ತು ಮಲ್ಲಂದೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ನೊಂದವರ ದಿನ ಸಭೆಯಲ್ಲಿ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ನಗರ, ಗ್ರಾಮಾಂತರ, ಮಹಿಳಾ ಹಾಗೂ ಸಂಚಾರಿ ಠಾಣೆಗಳಿಗೆ ಸಾರ್ವಜನಿಕರು ಅನ್ಯಾಯದ ವಿರುದ್ಧ ದೂರು ನೀಡುತ್ತಾರೆ. ಪ್ರಕರಣದ ವಿಚಾರಣೆ ಮುಗಿದು ಠಾಣೆಯಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದಾಗ ಎದುರುದಾರ, ದೂರುದಾರ ಇಬ್ಬರೂ ನಿಗದಿತ ಸಮಯಕ್ಕೆ ಹಾಜರಾಗಬೇಕು. ಆಗ ಮಾತ್ರ ಪ್ರಕರಣಕ್ಕೆ ತ್ವರಿತಗತಿಯಲ್ಲಿ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ನೊಂದವರಿಗೆ ನ್ಯಾಯ ದೊರಕಿಸಬೇಕು ಎಂಬುದು ಇಲಾಖೆಯ ಪ್ರಮುಖ ಉದ್ದೇಶ. ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾದಾಗ 112ಕ್ಕೆ ಕರೆ ಮಾಡಿ ತಿಳಿಸಬೇಕು. ಯಾವುದೇ ಸಂದರ್ಭದಲ್ಲಿ ಠಾಣೆಗೆ ಹೋಗಿ ದೂರು ನೀಡಿದಾಗ ಸಿಬ್ಬಂದಿ ಸ್ವೀಕರಿಸದಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ನೊಂದವರ ದೂರಿನ ಸ್ಥಿತಿಗತಿ ಮಾಹಿತಿ ಪಡೆದುಕೊಳ್ಳಲು ಕ್ಯೂಆರ್ ಕೋಡ್ ಬಳಕೆ ಮಾಡಿಕೊಳ್ಳಬೇಕು. ತನಿಖಾಧಿಕಾರಿಗಳು ವಿಳಂಬ ಮಾಡುತ್ತಿದ್ದರೆ, ಸಲಹೆಗಳು ಇದ್ದಲ್ಲಿ ಅಪ್‌ಲೋಡ್ ಮಾಡಬಹುದು ಎಂದರು.
ನೊಂದವರ ಸಭೆಯಲ್ಲಿ ಹಲವಾರು ಮಂದಿ ವಿವಿಧ ರೀತಿಯ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸಬೇಕಾದ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ. ಪ್ರಕರಣ ಸಂಬಂಧ ಎರಡೂ ಕಡೆಯವರನ್ನು ಕರೆಯಿಸಿ ವಿಚಾರಣೆ ನಡೆಸಬೇಕು ಎಂದು ತಿಳಿಸಿದರು.
ಪ್ರದೀಪ್ ಎಂಬುವರು ಮಾತನಾಡಿ, ಅಣ್ಣ ಪ್ರವೀಣ್ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ. ಉಳಿದ ಆರೋಪಿಗಳು ಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಹೊರಗೆ ಬಂದಿರುವ ಅವರು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಸಿಪಿಐ ಸತ್ಯನಾರಾಯಣ ಮಾತನಾಡಿ, ಪ್ರಕರಣದ ಎ1 ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಜಾಮೀನು ಪಡೆದವರು ಬೆದರಿಕೆ ಹಾಕುತ್ತಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದರು.
ಮನೆಯಲ್ಲಿ ಕಳವು, ವಾಹನ ಕಳವು, ಹಲ್ಲೆ, ಅಪಘಾತ, ಕಾಣೆಯಾಗಿರುವುದು ಹೀಗೆ ವಿವಿಧ ರೀತಿಯ ಪ್ರಕರಣ ಸಂಬಂಧ ನೊಂದವರು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಉಮಾ ಪ್ರಶಾಂತ್, ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಎಎಸ್ಪಿ ಕೃಷ್ಣಮೂರ್ತಿ, ಸಿಪಿಐ ಸತ್ಯನಾರಾಯಣ ಇತರರಿದ್ದರು.