

ಚಿಕ್ಕಬಳ್ಳಾಪುರ: ಜನವಸತಿ ಪ್ರದೇಶದಲ್ಲಿ ಸತ್ತ ಮೀನುಗಳ ರಾಶಿ ಸೇರಿದಂತೆ ಮಾಂಸದ ತ್ಯಾಜ್ಯ ಸುರಿಯುವಂತಹುದಾಗುತ್ತಿದೆ. ಇದರಿಂದ ಹರಡುತ್ತಿರುವ ದುರ್ವಾಸನೆಗೆ ಸ್ಥಳೀಯರು ಹೈರಾಣರಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರ ಬಳಿಯಿರುವ ಬೈಪಾಸ್ ರಸ್ತೆಯಲ್ಲಿನ ಶ್ರೀಸತ್ಯಸಾಯಿ ಲೇಔಟ್ ನ ಮೈದಾನದಲ್ಲಿರುವ ಗಿಡಗಳಲ್ಲಿ ಯಾರೋ ದುಷ್ಕರ್ಮಿಗಳು, ರಾತ್ರಿಯ ವೇಳೆಯಲ್ಲಿ ಸತ್ತ ಮೀನುಗಳು ತಂದು ಲೋಡುಗಟ್ಟಲೆ ಸುರಿದು ಹೋಗಿದ್ದು ಇದರಿಂದ ದುರ್ನಾತ ಬೀರುತ್ತಿದೆ. ಇದರಿಂದ ಲೇ ಔಟ್ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
ಹಾಡಹಗಲಿನಲ್ಲೆ ಟಿಲ್ಲರ್ ವೊಂದರಲ್ಲಿ ಮೀನುಗಳನ್ನು ತುಂಬಿಕೊಂಡು ಬಂದು ಇಲ್ಲಿ ಸುರಿದು ಹೋಗುತ್ತಿದ್ದರು. ಹೊಲದವರು ಗೊಬ್ಬರ ಬಿಡುತ್ತಿರಬಹುದೆಂದು ನಾವು ಸುಮ್ಮನಾದೆವು. ನಂತರ ಅವು ಕೊಳೆತು ದುರ್ವಾಸನೆ ಬೀರುವಾಗ ಮೀನುಗಳೆಂದು ಗೊತ್ತಾಯಿತು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ನಿವಾಸಿ ಲಲಿತಮ್ಮ ಒತ್ತಾಯಿಸಿದ್ದಾರೆ.
*ರಾತ್ರಿ ವೇಳೆ ಕುಡುಕರ ಹಾವಳಿ
ರಾತ್ರಿಯ ವೇಳೆ ಲೇಔಟ್ ಗಳು ಸೇರಿದಂತೆ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿಯ ವೇಳೆ ಮನೆಯಿಂದ ಹೊರಗೆ ಬರುವುದಕ್ಕೂ ಭಯವಾಗುತ್ತದೆ. ಕುಡಿದ ಮತ್ತಿನಲ್ಲಿ ಜೋರಾಗಿ ಕಿರುಚಾಡುತ್ತಿರುತ್ತಾರೆ. ರಾತ್ರಿ ೧ ಗಂಟೆಯಾದರೂ ಇಲ್ಲಿಂದ ಹೋಗುವುದಿಲ್ಲ. ಹಗಲಿನಲ್ಲಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಹೆಣ್ಣು ಮಕ್ಕಳು ಓಡಾಡುವುದಕ್ಕೆ ಭಯಪಡುವಂತಾಗಿದೆ. ಬೆಳಿಗ್ಗೆ ಎದ್ದರೆ ಕುಡುಕರು ಬಿಸಾಡಿರುವ ಮದ್ಯದ ಬಾಟಲಿಗಳ ದರ್ಶನ ಮಾಡಬೇಕು. ಕುಡುಕರ ಹಾವಳಿ ತಪ್ಪಿಸುವಂತೆ ಸ್ಥಳೀಯರಾದ ಶ್ರೀನಿವಾಸ್, ರಾಮಾಂಜಿ, ಮೀನಾಕ್ಷಿ ಮತ್ತಿತರರು ಒತ್ತಾಯಿಸಿದ್ದಾರೆ.