

ಶ್ರೀನಿವಾಸಪುರ: ವೃದ್ಧರಿಗೆ ಪಿಂಚಣಿ ಇಲ್ಲ, ಮಂಜೂರಾಗಿರುವ ಮನೆಗಳಿಗೆ, ರಸ್ತೆಗಳಿಗೆ, ಸಮುದಾಯ ಭವನಗಳಿಗೆ ಹಣವಿಲ್ಲ, ರೈತರಿಗಾಗಿ ಹೊಸ ಯೋಜನೆಗಳಿಲ್ಲ. ಇದೊಂದು ಶೂನ್ಯ ಆಶ್ವಾಸನೆಗಳ ಬಲವಂತದ ಮೇಲಿನ ಸರ್ಕಾರ. ಇವರನ್ನು ಜನ ತಿರಸ್ಕರಿಸಲಿದ್ದು, ಮುಂದೆ ನಮ್ಮ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಆರ್ಥಿಕ ನೆರವಿನಿಂದ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಶುಕ್ರವಾರ 258 ರೈತರಿಗೆ 2.85 ಕೋಟಿ ರೂ. ಬೆಳೆ ಸಾಲ ವಿತರಿಸಿ ಮಾತನಾಡಿ, ಕಷ್ಟಕಾಲದಲ್ಲಿ ಆರ್ಥಿಕ ಸಹಾಯ ಮಾಡುವವರು ತಂದೆಗೆ ಸಮಾನ. ಆ ಕೆಲಸವನ್ನು ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಈವರೆಗೆ 1,600 ಕೋಟಿ ರೂ. ಸಾಲ ನೀಡಲಾಗಿದೆ. ಇದು ಅಲ್ಪ ಸಮಾಧಾನವಾದರೂ ಮುಂದಿನ ದಿನಗಳಲ್ಲಿ 50 ಸಾವಿರ ಕೋಟಿ ರೂ. ವಹಿವಾಟು ನಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಂದೆ ಡಿಸಿಸಿ ಬ್ಯಾಂಕನ್ನು ಪ್ರಜಾ ಬ್ಯಾಂಕ್ ಆಗಿ ನೋಡುವುದು ನನ್ನ ಕನಸು ಎಂದರು.
ಪ್ರತಿ ರೈತ ಕುಟುಂಬಕ್ಕೂ ಸಾಲ ಕೊಡುವ ನಿಟ್ಟಿನಲ್ಲಿ ಗ್ರಾಮದಲ್ಲಿ ಶೇರುದಾರರ ಸಂಖ್ಯೆ ಹೆಚ್ಚಿಸಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲು ಸೊಸೈಟಿಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಡವರಿಗೆ ಅನ್ನಭಾಗ್ಯ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ಇಂದಿನ ಸರ್ಕಾರ ಆ ಯೋಜನೆಗಳನ್ನೆಲ್ಲ ಮುಂದುವರಿಸುವ ಶಕ್ತಿ ಕಳೆದುಕೊಂಡಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಯಾರಿಗೂ ಅಧಿಕಾರ ಶಾಶ್ವತವಲ್ಲ, ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಪಕ್ಷ, ಜಾತಿ ರಹಿತವಾಗಿ ಅರ್ಹರಿಗೆ ಸಾಲ ನೀಡಲಾಗುತ್ತಿದೆ. ಶೂನ್ಯ ಬಡ್ಡಿಯಲ್ಲಿ ಕೋಟ್ಯಂತರ ರೂ. ಸಾಲ ನೀಡುವ ಶಕ್ತಿ ತುಂಬಿದ್ದು ರಮೇಶ್‌ಕುಮಾರ್. ಇಲ್ಲಿನ ಜನತೆಗೆ ಮಾತ್ರವಲ್ಲದೆ ರಾಜ್ಯವ್ಯಾಪಿ ಈ ಯೋಜನೆ ಮುಂದುವರಿಯುತ್ತಿದೆ. ಇದು ಹೀಗೇ ಮುಂದುವರಿಯಲು ಪಡೆದ ಸಾಲವನ್ನು ಕೃಷಿಗಾಗಿ ಬಂಡವಾಳ ಹಾಕಿ ಬ್ಯಾಂಕಿಗೂ ಮರುಪಾವತಿಸಬೇಕು. ನಿಮ್ಮ ಮನೆ ಬಾಗಿಲಿಗೆ ತಲುಪಿಸಿರುವ ಸಾಲವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಅಮೀರ್‌ಖಾನ್, ರಾಮಕೃಷ್ಣೇಗೌಡ, ಅಪ್ಪಿರೆಡ್ಡಿ, ಕೋಡಿಪಲ್ಲಿ ಸುಬ್ಬರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯರೆಡ್ಡಿ, ಕೆ.ಕೆ.ಮಂಜುನಾಥ್‌ರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಸತ್ಯನಾರಾಯಣ, ಸಿಇಒ ಈರಪ್ಪರೆಡ್ಡಿ ಇತರರಿದ್ದರು.
ರಾಯಲ್ಪಾಡು ಹೋಬಳಿಯ ಸುಣ್ಣಕಲ್ ಬೆಟ್ಟದ ಸಾಲುಗಳಲ್ಲಿ ಡ್ಯಾಂ ನಿರ್ಮಾಣ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ. ಅದು ನಿರ್ಮಿಸಿದರೆ ನೆಲವಂಕಿ ಮತ್ತು ರಾಯಲ್ಪಾಡು ಹೋಬಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಮುದುವಾಡಿ ಕೆರೆ ದೀಪಾವಳಿಯೊಳಗೆ ಕೋಡಿ ಹರಿಯಲಿದೆ. ಕೆಸಿ ವ್ಯಾಲಿ ನೀರು ತಾಲೂಕಿನ ಎಲ್ಲ ಕೆರೆಗಳಿಗೂ ಹರಿಯಲಿವೆ. ಕೆ.ಆರ್.ರಮೇಶ್‌ಕುಮಾರ್, ಶಾಸಕ