ರಾತ್ರೋರಾತ್ರಿ ಮನೆ ತೊರೆದ ಜನ

bhr flood
ಬಾಳೆಹೊನ್ನೂರಿನ ಮೀನು ಮಾರ್ಕೆಟ್ ರಸ್ತೆಯಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣ ಜಲಾವೃತಗೊಂಡಿರುವುದು.
Published on

ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಸೋಮವಾರ ರಾತ್ರಿ ಪುಷ್ಯ ಮಳೆ ಅಬ್ಬರ ಹೆಚ್ಚಾಗಿ, ಮಂಗಳವಾರ ಬೆಳಗಿನ ವೇಳೆಗೆ ಜನಜೀವನ ಅಸ್ತವ್ಯವಾಯಿತು. ಸೋಮವಾರ ರಾತ್ರಿ 9 ಗಂಟೆ ಬಳಿಕ ಬಿರುಸುಗೊಂಡ ಮಳೆ ಮಂಗಳವಾರ ಮುಂಜಾನೆ ವೇಳೆಗೆ ಪ್ರವಾಹ ಪರಿಸ್ಥಿತಿ ಉಂಟು ಮಾಡಿ ವಿವಿಧ ಪ್ರದೇಶಗಳು ಜಲಾವೃತಗೊಂಡವು.

ಕುದುರೆಮುಖ, ಕಳಸ ವ್ಯಾಪ್ತಿಯಲ್ಲೂ ರಾತ್ರಿಯಿಡೀ ವ್ಯಾಪಕ ಮಳೆಯಾದ ಪರಿಣಾಮ ಒಮ್ಮಿಂದೊಮ್ಮೆಲೆ ಪ್ರವಾಹ ಪರಿಸ್ಥಿತಿ ಎದುರಾಯಿರು. ಬಾಳೆಹೊನ್ನೂರಿನಿಂದ ಕಳಸ-ಹೊರನಾಡು, ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದ್ದು, ಮಾಗುಂಡಿ ಸಮೀಪದ ತೆಪ್ಪದಗಂಡಿ ಮುಖ್ಯರಸ್ತೆ, ಮಹಲ್ಗೋಡು ಸೇತುವೆ ಮೇಲೆ ಭದ್ರಾ ನದಿಯ ನೆರೆ ಬಂದು ಸಂಪರ್ಕ ಕಡಿತಗೊಂಡಿದೆ.
ಬಾಳೆಹೊನ್ನೂರಿನಿಂದ ಹುಯಿಗೆರೆ ಸಂಪರ್ಕಿಸುವ ಎಲೆಕಲ್ಲು ರಸ್ತೆಯ ಮೇಲೆಯೂ ಭದ್ರಾ ನದಿ ನೀರು ಬಂದಿದ್ದು, ಸಂಚಾರ ಬಂದ್ ಆಗಿದೆ. ಹುಯಿಗೆರೆ-ಮಾಗುಂಡಿ ನಡುವಿನ ಹುಲಿಗೆಹಳ್ಳ ಹೊಳೆಯೂ ತುಂಬಿ ಹರಿದ ಪರಿಣಾಮ ಆ ರಸ್ತೆಯು ಬಂದ್ ಆಗಿದೆ. ಬಾಳೆಹೊನ್ನೂರಿನಿಂದ ಎನ್.ಆರ್.ಪುರ-ಶಿವಮೊಗ್ಗ ಸಂಪರ್ಕ ಕಲ್ಪಿಸುವ ವಾಟುಕೊಡಿಗೆ-ಸೀಕೆ ಬಳಿ ಮುಖ್ಯರಸ್ತೆಗೆ ನೀರು ಬಂದಿದ್ದು ಸಂಚಾರ ಕಡಿತಗೊಂಡಿದೆ. ಪಟ್ಟಣದ ಭದ್ರಾ ಎಸ್ಟೇಟ್ ಒಳಗಿನ ಕೂಲಿಲೈನ್‌ಗಳಿಗೆ ತೆರಳುವ ರಸ್ತೆಯ ಮೇಲೆಯೂ ನೀರು ಬಂದಿದ್ದು ಜನರು ಎಸ್ಟೇಟಿನಿಂದ ಹೊರ ಬರದಂತಾಗಿದೆ.
ಬಾಳೆಹೊನ್ನೂರು ವ್ಯಾಪ್ತಿಯ ಬಿ.ಕಣಬೂರು, ಬನ್ನೂರು, ಮಾಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 16 ಮನೆಗಳಿಗೆ ಮಂಗಳವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಭದ್ರಾ ನದಿಯ ಪ್ರವಾಹದ ನೀರು ನುಗ್ಗಿತು. ಮಹಲ್ಗೋಡು, ಹೊಳೆಬಾಗಿಲು, ಜಕ್ಕಣಕ್ಕಿ, ಬಾಳೆಹೊನ್ನೂರು ಪಟ್ಟಣ ಭಾಗದ 16 ಕುಟುಂಬಸ್ಥರು ರಾತ್ರೋರಾತ್ರಿ ಮನೆಯ ಸಾಮಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ಸಂಬಂಧಿಕರ ಮನೆ, ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಪಟ್ಟಣದ ಡೋಬಿಹಳ್ಳದ ದಡದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಕ್ಕೆ ನೀರು ನುಗ್ಗಿದ್ದು, ಔಷಧ ಸಂಪೂರ್ಣ ಹಾನಿಗೊಂಡಿದೆ. ಅಕ್ಕಪಕ್ಕದ ಹೋಟೆಲ್, ಅಂಗಡಿಗಳಿಗೂ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ರೋಟರಿ ವೃತ್ತದ ಸಮೀಪದಲ್ಲಿ ಖಾಸಗಿ ಜಮೀನಿನಲ್ಲಿರುವ ಮನೆ ಹಾಗೂ ಗೋಡಾನ್‌ಗೆ ನೀರು ನುಗ್ಗಿದ್ದು, ಗೋಡಾನ್‌ನಲ್ಲಿದ್ದ ರಸಗೊಬ್ಬರದ ಮೂಟೆಗಳು ನೀರಿನಲ್ಲಿ ಕರಗಿವೆ. ಇಲ್ಲಿನ ಮನೆಯಲ್ಲಿದ್ದ ಜನ, ಜಾನುವಾರುಗಳನ್ನು ಪ್ರವಾಹದಿಂದ ರಕ್ಷಿಸಲಾಗಿದೆ. ಸಮೀಪದಲ್ಲಿಯೇ ಭದ್ರಾ ನದಿಯ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ತಂದಿದ್ದ ಜನರೇಟರ್ ಸೇರಿದಂತೆ ವಿವಿಧ ಪರಿಕರಗಳು ನೀರಿನಲ್ಲಿ ಮುಳುಗಿದ್ದವು.
ಪಟ್ಟಣದ ಮೀನು ಮಾರ್ಕೆಟ್ ಸಮೀಪದಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣ ಮುಕ್ಕಾಲು ಭಾಗ ಪ್ರವಾಹದಲ್ಲಿ ಮುಳುಗಿದ್ದು, ಛಾವಣಿ ಮಾತ್ರ ಗೋಚರವಾಗುತ್ತಿತ್ತು. ಪ್ರವಾಹದ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ, ಬನ್ನೂರು, ಮಾಗುಂಡಿ, ಮಹಲ್ಗೋಡು, ಜಕ್ಕಣಕ್ಕಿ, ಬೈರೇಗುಡ್ಡ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಅಡಕೆ, ಕಾಫಿ ತೋಟ, ಗದ್ದೆಗಳು ಜಲಾವೃತವಾಗಿದ್ದವು. ಭದ್ರಾ ನದಿ ರೌದ್ರಾವತಾರ ತಾಳಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಭಾರಿ ಗಾತ್ರ ಮರದ ದಿಮ್ಮಿಗಳು ತೇಲಿಹೋಗುತ್ತಿದ್ದವು.
ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಜನರು ತಂಡೋಪತಂಡವಾಗಿ ಬಂದು ವೀಕ್ಷಿಸಿದರು. ಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆ ವೇಳೆಗೆ ನೀರಿನ ಹರಿವು 10 ಮೀಟರ್ ಎತ್ತರದಲ್ಲಿದ್ದು, ಇದು ಈ ವರ್ಷದಲ್ಲಿ ದಾಖಲೆಯ ಹರಿವಾಗಿದೆ ಎಂದು ನೀರಿನ ಮಾಪಕಕಾರ ಸಂದೇಶ್ ತಿಳಿಸಿದ್ದಾರೆ.
ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಮಾಗುಂಡಿ ಫೀಡರ್‌ನ ಮಾಗುಂಡಿ ಗ್ರಾಪಂ ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ, ಗಡಿಗೇಶ್ವರ ಫೀಡರ್‌ನ ಬಾಳೆ ಗ್ರಾಪಂ, ಆಡುವಳ್ಳಿ ಗ್ರಾಪಂ, ಬಿ.ಕಣಬೂರು ಗ್ರಾಪಂ ಹಾಗೂ ಕಾನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.
ಖಾಂಡ್ಯ ಹೋಬಳಿಯಲ್ಲೂ ಮಳೆ ಅಬ್ಬರಕ್ಕೆ ಖಾಂಡ್ಯ ಮಾರ್ಕಾಂಡೇಶ್ವರ ಸಮೀಪ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ದೇವಸ್ಥಾನದ ಸಮೀಪದ ನದಿ ದಂಡೆಯಲ್ಲಿನ ಅಸ್ಥಿವಿಸರ್ಜನೆ ಮಂಟಪ ಜಲಾವೃತವಾಗಿದೆ. ನದಿ ಸನಿಹದ ಆನೆಬಿದ್ದ ಹಳ್ಳವೂ ತುಂಬಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net