

ಶನಿವಾರಸಂತೆ: ತವರಿನ ಜನತೆ ಹುತಾತ್ಮ ಯೋಧ ಪಳಂಗೋಟು ದಿವಿನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರ ವಿದಾಯ ಹೇಳಿದರು.
ಕಾಶ್ಮೀರದಲ್ಲಿ ಇತ್ತೀಚೆಗೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾದ ಪಳಂಗೋಟು ದಿವಿನ್ ಓದಿ, ಆಡಿ, ಬೆಳೆದ ಆಲೂರು ಸಿದ್ದಾಪುರ ಕಾಲೇಜು ಮೈದಾನಕ್ಕೆ ಬುಧವಾರ ದಿವಿನ್ ಪಾರ್ಥಿವ ಶರೀರ ತರಲಾಯಿತು. ಅಂತಿಮ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿತ್ತು.
ದಿವಿನ್ ಪಾರ್ಥಿವ ಶರೀರದ ದರ್ಶನಕ್ಕಾಗಿ ಬೆಳಗ್ಗಿನಿಂದಲೇ ಕಾದು ನಿಂತಿದ್ದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರತಿಯಲ್ಲಿ ಸಾಗಿ ಅಂತಿಮ ನಮನ ಸಲ್ಲಿಸಿದರು. ಭಾರತ್ ಮಾತಾ ಕಿ ಜೈ... ದಿವಿನ್ ಅಮರ್ ರಹೇ... ಮತ್ತೊಮ್ಮೆ ಹುಟ್ಟಿ ಬಾ ದಿವಿನ್.. ಘೋಷಣೆಗಳು ಮೊಳಗಿದವು.
ಕರುಳಿನ ಕುಡಿ ಕಳೆದುಕೊಂಡ ದುಃಖದಲ್ಲಿ ಮಗನ ಮುಖವನ್ನೇ ದಿಟ್ಟಿಸುತ್ತ ಬಸವಳಿದು ಕುಳಿತಿದ್ದ ಹುತಾತ್ಮ ದಿವಿನ್ ತಾಯಿ ಜಲಜಾಕ್ಷಿ ಕಳೆದ ವರ್ಷವಷ್ಟೇ ಪತಿಯನ್ನು ಕಳೆದುಕೊಂಡಿದ್ದರು. ಈಗ ಮಗನನ್ನು ಕಳೆದುಕೊಂಡಿದ್ದಾರೆ. ಇವರ ದುಃಖವನ್ನು ಕಂಡು ಸಂಬಂಧಿಕರು, ಗ್ರಾಮಸ್ಥರು ಕಣ್ಣೀರಾದರು. ಸಾರ್ವಜನಿಕರು, ಶಾಲಾ ಮಕ್ಕಳು, ಮಾಜಿ ಸೈನಿಕರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸುವ ದೃಶ್ಯ ಭಾವನಾತ್ಮಕವಾಗಿತ್ತು.
ದಿವಿನ್ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ತವರು ಜಿಲ್ಲೆಗೆ ತಂದು, ರಾತ್ರಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿತ್ತು. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 10 ಗಂಟೆತನಕ ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಡಲಾಗಿತ್ತು.
ಕುಶಾಲನಗರದಲ್ಲಿ ಪುಷ್ಪನಮನ: ಬೆಳಗ್ಗೆ 7 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸಿದ ಸಾರ್ವಜನಿಕರು, ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಕುಶಾಲನಗರದಲ್ಲೇ ಪುಷ್ಪ ನಮನ ಸಲ್ಲಿಸಿದರು. ನಂತರ ಸ್ವಗ್ರಾಮ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರಕ್ಕೆ ಸೇನಾ ವಾಹನದಲ್ಲಿ ದಿವಿನ್ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.
ಮೊಳಗಿದ ಘೋಷಣೆಗಳು: ಮುಳ್ಳುಸೋಗೆ, ಕೂಡ್ಲೂರು, ಕೂಡುಮಂಗಳೂರು, ಕೂಡಿಗೆ, ಹಳೇಕೂಡಿಗೆ, ಕಣಿವೆ, ಹುಲುಸೆ, ಹೆಬ್ಬಾಲೆ, ಅರಸಿನಗುಪ್ಪೆ, ಅಳುವಾರ, ಸಿದ್ದಲಿಂಗಪುರ, ಬಾಣವಾರ, ಸಂಗಯ್ಯನಪುರ.. ಹೀಗೆ ಪಾರ್ಥಿವ ಶರೀರ ಹೊತ್ತ ವಾಹನ ಸಾಗಿದ ದಾರಿಯುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದಿವಿನ್‌ಗೆ ನಮನ ಸಲ್ಲಿಸಿ, ಘೋಷಣೆಗಳನ್ನು ಕೂಗಿದರು.
ನಂತರ ದಿವಿನ್ ಅವರ ಪಾರ್ಥಿವ ಶರೀರವನ್ನು ಅವರು ಓದಿದ ಆಲೂರು ಸಿದ್ದಾಪುರ ಕಾಲೇಜು ಆವರಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಪಾರ್ಥಿವ ಶರೀರ ಕ್ರೀಡಾಂಗಣ ತಲುಪುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಗದ್ಗದಿತರಾದರು.
ಸರ್ಕಾರಿ ಗೌರವ ಸಲ್ಲಿಕೆ: ಎಸ್‌ಪಿ ಕೆ.ರಾಮರಾಜನ್ ನೇತೃತ್ವದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌವರ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರ್‌ರಾಜ್, ಪ್ರೊಬೆಷನರಿ ಎಸ್‌ಪಿ ಡಾ.ಬೆನಕ ಪ್ರಸಾದ್, ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ, ಧರ್ಮಜ ಉತ್ತಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದರು.
ಆಲೂರು ಸಿದ್ದಾಪುರ ಗ್ರಾಮದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಿಸುವ ಮೂಲಕ ಸ್ಥಳೀಯ ವ್ಯಾಪರಸ್ಥರು ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.
ಜನರಿಂದ ಆಕ್ರೋಶ: ಆಲೂರು ಸಿದ್ದಾಪುರ ಕಾಲೇಜು ಕ್ರೀಡಾಂಗಣದಲ್ಲಿ ಹುತಾತ್ಮ ಯೋಧ ದಿವಿನ್ ಅಂತಿಮ ದರ್ಶನಕ್ಕೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಯಿತು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡಿದವು. ಈ ರೀತಿಯ ಬೇಜವಾಬ್ದಾರಿತನದ ವರ್ತನೆ ಯಾಕೆ ? ದಿವಿನ್ ಹುತಾತ್ಮರಾದ ನಂತರ ಮೂರು ದಿನಗಳ ಕಾಲಾವಕಾಶ ಸಿಕ್ಕಿದ್ದರೂ ಸರಿಯಾದ ವ್ಯವಸ್ಥೆ ಯಾಕೆ ಮಾಡಲಿಲ್ಲ ಎಂದು ಹಲವರು ಪ್ರಶ್ನಿಸಿದರು. ಶಾಲಾ ಮಕ್ಕಳು, ಸಾರ್ವಜನಿಕರು ಉದ್ದೂದ್ದ ಸರತಿ ಸಾಲಿನಲ್ಲಿ ನಿಂತು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ತನಕ ಬಿರು ಬಿಸಿಲಿನಲ್ಲಿ ಬಸವಳಿಯಬೇಕಾಯಿತು.