ತೇಜಸ್ವಿ ಅವರ "ಅಣ್ಣನ ನೆನಪು' ವೀಕ್ಷಣೆಗೆ ಮುಗಿಬಿದ್ದ ಜನರು

mysore
Published on

ಮೈಸೂರು: ಕಿರುರಂಗಮಂದಿರದಲ್ಲಿ ಥಿಯೇಟರ್ ಪ್ರವರ ಪ್ರಸ್ತುತಪಡಿಸಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ನಾಟಕ ವೀಕ್ಷಣೆಗೆ ಜನರು ಮುಗಿಬಿದ್ದರು. ಸ್ಥಳಾವಕಾಶದ ಸಿಗದೇ ಕೆಲವರು ನಿರಾಸೆಯಿಂದ ಮರಳಿದರು.


ರಾಷ್ಟ್ರಕವಿ ಕುವೆಂಪು ಸಾಹಿತ್ಯ ಎಲ್ಲ ಸಮಯಕ್ಕೂ ಪ್ರಸ್ತುತವಾಗಿದೆ ಎಂದು ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ತಜ್ಞ ಕೃಪಾಕರ ಹೇಳಿದರು.


ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಕಿರು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.


1880ರಲ್ಲಿ ಖ್ಯಾತ ಚಿತ್ರಕಲಾವಿದ ವಿನ್ಸೆಂಟ್ ವ್ಯಾನ್‌ಗೋ ಬರೆದ ಕಲಾಕೃತಿ ಮೇಲೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಕುವೆಂಪು ಅವರು 1940-50ನೇ ದಶಕದಲ್ಲಿ ಬರೆದದ್ದು ಇವತ್ತು ಚರ್ಚೆ ಮತ್ತು ಸಂವಾದ ಆಗುತ್ತಿದೆ. ಹಾಗಾಗಿ ಸಾಹಿತಿಗಳು, ಕಲಾವಿದರೂ ಎಲ್ಲ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂದರು.
ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಮಾತನಾಡಿ, ಅಣ್ಣನ ನೆನಪು ನಾಟಕ ನೋಡಬೇಕೆಂದುಕೊಂಡಾಗ ನನ್ನ ಬಾಲ್ಯವನ್ನು ನೆನಪು ಮಾಡಿಕೊಂಡೆ ಎಂದರು.


ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಮಾತನಾಡಿ, ಅಣ್ಣನ ನೆನಪು ಕುವೆಂಪು ಅವರ ಜೀವನ ಚರಿತ್ರೆ. ಇದನ್ನು ನಾಟಕ ರೂಪಕ್ಕೆ ತರುವುದು ಸುಲಭವಲ್ಲ. ಇದು ನಾಟಕವಲ್ಲದ ನಾಟಕ ಎಂದು ಅಭಿಪ್ರಾಯಪಟ್ಟರು.


ಅಣ್ಣನ ನೆನಪು ನಾಟಕವನ್ನು 2ನೇ ಬಾರಿಗೆ ನೋಡುತ್ತಿದ್ದು, ಕಲಾವಿದರು ಸಾಕಷ್ಟು ಬದಲಾವಣೆಯೊಂದಿಗೆ ಅಭಿನಯಿಸುತ್ತಿದ್ದಾರೆ ಎಂದು ತಿಳಿಸಿದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಜಾಗತೀಕರಣದ ಬದುಕಿನಲ್ಲಿ ಸಮಾಜದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಅಧಿಕವಾಗುತ್ತಿವೆ. ಇಂತಹ ಸಂದರ್ಭದಲ್ಲಿ ತಂದೆಯನ್ನು ನೆನಪು ಮಾಡಿಕೊಳ್ಳುವುದು ಭಾವನಾತ್ಮಕ ಸಂಬಂಧವಾಗಿದೆ. ಹೀಗಾಗಿ ಅಣ್ಣನ ನೆನಪು ನಾಟಕ ಪ್ರಸ್ತುತವಾಗಿದೆ ಎಂದು ತಿಳಿಸಿದರು.


ರಾಯಚೂರಿನ ಅಪರ ಪೊಲೀಸ್ ಅಧೀಕ್ಷಕ ಡಾ.ಶಿವಕುಮಾರ್ ದಂಡಿನ ಮಾತನಾಡಿ, ಮಕ್ಕಳಿಗೆ ಕುವೆಂಪು, ತೇಜಸ್ವಿ ಅವರನ್ನು ಪರಿಚಯಿಸಲು ಅಣ್ಣನ ನೆನಪು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಹಿಂದಿನ ಕಾರ್ಯಕ್ರಮಗಳಿಗೆ ಜನರನ್ನು ಕರೆಯಬೇಕಿತ್ತು. ತೇಜಸ್ವಿ ಎಂಬ ಹೆಸರೇ ಇಡೀ ಸಭಾಂಗಣವನ್ನು ಭರ್ತಿ ಮಾಡಿದೆ. ಇದು ಕುವೆಂಪು ಮತ್ತು ತೇಜಸ್ವಿ ಅವರ ಶಕ್ತಿಯೂ ಹೌದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net