ಕರೊನಾ ಭೀತಿಯಿಂದ ಮನೆ ಬಿಡದ ಜನ

15TMK_Korona_Effect1
Published on

ತುಮಕೂರು: ಕರೊನಾ ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನ ಪಾಲಿಸಲು ಮುಂದಾಗಿರುವ ಜಿಲ್ಲೆಯ ಜನರು ಮನೆಯಿಂದ ಹೊರಬರುವುದನ್ನೇ ಕಡಿಮೆ ಮಾಡಿದ್ದಾರೆ!

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ನಗರ ಸಾರಿಗೆ, ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮುಂಜಾಗ್ರತೆಗಾಗಿ ಬೀದಿ ಬದಿಯ ತಿನಿಸುಗಳ ವ್ಯಾಪಾರಕ್ಕೂ ಪಾಲಿಕೆ ಕಡಿವಾಣ ಹಾಕಿದೆ.

ನಗರದಲ್ಲಿ ಕೋಳಿ ಮಾರಾಟ ನಿರ್ಬಂಧಿಸಲಾಗಿದೆ. ಮಾಂಸಾಹಾರ ಸಿಗದಂತಾಗಿದೆ. ಕೆಲವರು ಅನಿವಾರ್ಯವಾಗಿ ಹೋಟೆಲ್‌ಗಳನ್ನು ಅವಲಂಭಿಸಿದ್ದು ಕೆಲ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ.

ಜನಜಂಗುಳಿಯಿಂದ ತುಂಬಿರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದರಿಂದ ಬಸ್‌ಗಳ ಸಂಖ್ಯೆಗಳನ್ನೂ ಕಡಿಮೆ ಮಾಡಲಾಗಿದೆ.

ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕಾಣಿಸಿದ ಬಹುತೇಕ ಪ್ರಯಾಣಿಕರು ಮಾಸ್ಕ್‌ಗೆ ಮೊರೆ ಹೋಗಿದ್ದರು. ಟಿಕೆಟ್ ಕೌಂಟರ್‌ನಲ್ಲಿಯೂ ಸಿಬ್ಬಂದಿ ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಿದರು. ಕರೊನಾ ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನವನ್ನು ಅಚ್ಚುಕಟ್ಟಾಗಿ ಪಾಲಿಸಲಾಗುತ್ತಿದೆ.

ಕಲ್ಯಾಣ ಮಂಟಪಗಳಲ್ಲಿ ಮದುವೆ, ಶುಭ ಸಮಾರಂಭಗಳು ನಡೆದರೂ ಜನಸಂದಣಿ ವಿರಳವಾಗಿತ್ತು. ಪೂರ್ವನಿಶ್ಚಯದಂತೆ ವಿವಾಹಗಳು ನಡೆದವಾದರೂ ಭಾಗವಹಿಸಿದವರ ಸಂಖ್ಯೆ ಕಡಿಮೆಯಾಗಿತ್ತು. ವಾರ್ಷಿಕ ಪರೀಕ್ಷೆ ಮುಂದೂಡಿಕೆ!

ವಾರ್ಷಿಕ ಪರೀಕ್ಷೆ ಮುಂದೂಡಿಕೆ!: ಶನಿವಾರದಿಂದ ಆರಂಭವಾಗಿರುವ 7 ರಿಂದ 9ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ಮುಂದೂಡಿ ರಾಜ್ಯ ಸರ್ಕಾರ ಭಾನುವಾರ ಆದೇಶಿಸಿದೆ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಐ, ಐಜಿಸಿಎಸ್‌ಇ, ಐಬಿ ಮುಂತಾದ ಪಠ್ಯಕ್ರಮದ ಎಲ್ಲ್ಲ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದ್ದು ಮಾ.31ರ ವರೆಗೆ ವಿದ್ಯಾರ್ಥಿಗಳಿಗೆ ಪರಿಕ್ಷಾ ಪೂರ್ವ ರಜೆ ಘೋಷಿಸಲಾಗಿದೆ. ಏ.1ರ ನಂತರ ಪರಿಸ್ಥಿತಿ ಅವಲೋಕಿಸಿ ಪರೀಕ್ಷಾ ದಿನಾಂಕವನ್ನು ಸರ್ಕಾರ ಘೋಷಿಸಲಿದೆ.

ವಿವಿಧ ಜಾತ್ರೆಗಳು ರದ್ದು: ಚಿಕ್ಕನಾಯಕನಹಳ್ಳಿ ತಾಲೂಕು ಮಲ್ಲಿಗೆ ಕರಿಯಮ್ಮ ಜಾತ್ರಾ ಮಹೋತ್ಸವ ರದ್ದುಪಡಿಸಲಾಯಿತು. ಶುಕ್ರವಾರದಿಂದ ಆರಂಭವಾಗಿದ್ದ ಜಾತ್ರೆಗೆ ಶನಿವಾರವೇ ಬ್ರೇಕ್ ಬಿದ್ದಿದ್ದರಿಂದ ವ್ಯಾಪಾರಕ್ಕೆಂದು ಆಗಮಿಸಿದ್ದ ಅಂಗಡಿಯವರು ಗಂಟು, ಮೂಟೆ ಕಟ್ಟಿದರು. ಮಂಗಳವಾರ ವಿಜೃಂಭಣೆಯ ರಥೋತ್ಸವ ನಡೆಯಬೇಕಿತ್ತು, ಗ್ರಾಮೀಣ ಭಾಗದ ಸಾಕಷ್ಟು ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ತಿಪಟೂರು ತಾಲೂಕಿನ ಹೊನ್ನವಳ್ಳಿಯ ಐತಿಹಾಸಿಕ ಉಡಿಸಲಮ್ಮದೇವಿ ಜಾತ್ರೆಗೂ ಕರೊನಾ ಭೀತಿ ತಟ್ಟಿದೆ. ಮಾ.8ರಿಂದ ಜಾತ್ರೆ ಆರಂಭವಾಗಿದ್ದು, ಮಾ.16ರಂದು ರಥೋತ್ಸವ ನಡೆಯುವ ಮೂಲಕ ಅದ್ಧೂರಿಯಾಗಿ ಸಂಪನ್ನಗೊಳ್ಳಬೇಕಿತ್ತು. ಆದರೆ ಕರೊನಾ ಭೀತಿಯಿಂದ ರಥೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ಸದಸ್ಯ ಎಚ್.ಆರ್.ಶ್ರೀಕಂಠಮೂರ್ತಿ ತಿಳಿಸಿದ್ದಾರೆ. ಗುಬ್ಬಿ ತಾಲೂಕಿನ ಮಾದಾಪುರದಲ್ಲಿ 17ರಿಂದ ಏಳು ದಿನಗಳ ಕಾಲ ನಡೆಯಲಿರುವ ಶ್ರೀ ಮಣ್ಣಮ್ಮದೇವಿ ಜಾತ್ರೆಯನ್ನು ಸರಳವಾಗಿ ಆಚರಿಸಲು ದೇವಾಲಯ ಸಮಿತಿ ನಿರ್ಧರಿಸಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net