

ದಾಂಡೇಲಿ: ಪುಸ್ತಕಗಳನ್ನು ಕೊಳ್ಳುವ ಜನರು ಕಡಿಮೆಯಾಗಿರುವ ಇಂದಿನ ದಿನಮಾನಗಳಲ್ಲಿ ಸಾಹಿತಿಗಳು ರಚಿಸಿದ ಕೃತಿಗಳನ್ನು ಸಾಹಿತಿಗಳೇ ಕೊಂಡು ಓದಬೇಕಾದ ಪರಿಸ್ಥಿತಿಯಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘ ಪಂಚಗಾನ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತಿ ದೀಪಾಲಿ ಸಾಮಂತ ರಚನೆಯ ‘ಮಧು ಭಾವ ಶರಧಿ’ ಕವನ ಸಂಕಲನ ಬಿಡುಗಡೆ, ರಾಜ್ಯ ಮಟ್ಟದ ಡಾ. ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರದಾನ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ದೀಪಾಲಿ ಸಾಮಂತ ಅವರ ಇನ್ನೊಂದು ಕೃತಿ ‘ನಕ್ಕರದುವೇ ನಾಕವು’ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್.ಜೈನ್, ಪ್ರತಿಯೊಂದು ಜೀವಿಗೂ ಸಾವಿದೆ. ಕಟ್ಟಿದ ಕಟ್ಟಡ ಬೀಳಬಹುದು, ದೇಣಿಗೆಯಾಗಿ ಕೊಟ್ಟ ವಸ್ತುಗಳು ಹಾಳಾಗಬಹುದು. ಆದರೆ, ಬರೆದ ಅಕ್ಷರಗಳು ಸದಾ ಜೀವಂತವಾಗಿರುತ್ತವೆ. ಈ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಅಬ್ದುಲ್ ರೆಹಮಾನ್, ದೇಶವು ಜಾತೀಯತೆಯಿಂದ ಬಳಲುತ್ತಿದೆ. ಇದನ್ನು ವಿರೋಧಿಸುವ ಬರಹಗಳು ಹೆಚ್ಚಾಗಿ ಬರಬೇಕು ಎಂದರು.
ವೇದಿಕೆ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಮಾತನಾಡಿದರು. ನಗರದ ಸಾಹಿತ್ಯ ಪ್ರತಿಭೆ ಕುಶಾಲ್ ಶರದ್ ಕುಲಕರ್ಣಿ, ಮೈಸೂರು ಜಿಲ್ಲೆಯ ಮಹಮುದ್ ಅಂಜುಮ್ ಪಾಷಾ, ಕೊಡಗು ಜಿಲ್ಲೆಯ ರಶ್ಮಿ ಚಂಗಚಂಡ, ವಿಜಯಪುರ ಜಿಲ್ಲೆಯ ಗುರುಲಿಂಗಪ್ಪ ಮಲ್ಲಪ್ಪ ಹಳ್ಳೂರ ಅವರಿಗೆ ಡಾ.ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.
ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ದೀಪಾಲಿ ಸಾಮಂತ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಕೋಲಕಾರ್ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಗಿರೀಶ ಶಿರೋಡ್ಕರ್ ವಂದಿಸಿದರು. ಕೊನೆಯಲ್ಲಿ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.