ಹಣಕ್ಕಾಗಿ ಗರ್ಭಿಣಿ ಮೇಲೆ ಹಲ್ಲೆ ಮಾಡಿದವರ ಸೆರೆ

Published on

ಬೆಂಗಳೂರು: ಬಾಡಿಗೆ ತಾಯ್ತನದಲ್ಲಿ ಗರ್ಭ ಧರಿಸಿದ್ದಾಕೆ ಮೇಲೆ ಹಣಕ್ಕಾಗಿ ಹಲ್ಲೆ ನಡೆಸಿ ಗರ್ಭಪಾತ ಮಾಡಿದ ಆರು ಮಂದಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬಂಡೇಪಾಳ್ಯದ ಪೂಜಾ (32), ಮಂಜುನಾಥ್ (30), ಪ್ರೇಮಾ (35), ಆಶಾ (31), ರೀಟಾ (30) ಹಾಗೂ ಪ್ರಮೀಳಾ (31) ಬಂಧಿತರು. ಕಳೆದ ಬುಧವಾರ (ಮಾ.11) ರಾತ್ರಿ 10.30 ಗಂಟೆಗೆ ಪೇಯಿಂಗ್ ಗೆಸ್ಟ್​ಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಸಂತ್ರಸ್ತೆಗೆ ಗರ್ಭಪಾತವಾಗಿತ್ತು ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ತಿಳಿಸಿದ್ದಾರೆ.ಮೈಕೋ ಲೇಔಟ್ ನಿವಾಸಿ 27 ವರ್ಷದ ಮಹಿಳೆ, ವಿಶ್ವಾಸ್ ಫರ್ಟಿಲಿಟಿ ಸೆಂಟರ್ ಮೂಲಕ ಬಾಡಿಗೆ ತಾಯ್ತನದಲ್ಲಿ ಗರ್ಭ ಧರಿಸಿದ್ದರು. ಫರ್ಟಿಲಿಟಿ ಸೆಂಟರ್​ನವರು ಆಕೆಯನ್ನು ಮೈಕೋ ಲೇಔಟ್​ನ ಪಾವತಿಸುವ ಅತಿಥಿಗೃಹದಲ್ಲಿ (ಪಿ.ಜಿ) ಇರಿಸಿದ್ದರು. ಬಾಡಿಗೆ ತಾಯ್ತನದಲ್ಲಿ ಗರ್ಭ ಧರಿಸಿರುವ ವಿಚಾರ ತಿಳಿದಿದ್ದ ಆರೋಪಿಗಳು, ಪಿ.ಜಿ.ಗೆ ನುಗ್ಗಿ ಹಣ ಕೊಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಗರ್ಭಿಣಿ ನಿರಾಕರಿಸಿದಾಗ ಮನಬಂದಂತೆ ಹಲ್ಲೆ ನಡೆಸಿದ್ದರು. ಹಲ್ಲೆ ತಡೆಯಲು ಮುಂದಾದ ಪಿ.ಜಿ. ಮುಖ್ಯಸ್ಥೆ ಗೀತಾ ಹಾಗೂ ಅಲ್ಲಿ ನೆಲೆಸಿದ್ದ ಇತರ ಯುವತಿಯರಿಗೂ ಥಳಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net