

ಪಾಂಡವಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಭಾರತ್ ಅಕ್ಕಿಯನ್ನು 29ರೂ. ದರದಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನ ಮುಗಿಬಿದ್ದು ಅಕ್ಕಿ ಖರೀದಿಸಿದರು.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಭಾರತ್ ಅಕ್ಕಿ ಚೀಲಗಳು ತುಂಬಿದ ವಾಹನ ಆಗಮಿಸುತ್ತಿದ್ದಂತೆ 29 ರೂ. ದರದಲ್ಲಿ ಮಾರಾಟವಾಗುತ್ತಿರುವ ಅಕ್ಕಿಗಾಗಿ ಜನ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು 10 ಕೆಜಿ ತೂಕದ ಚೀಲಕ್ಕೆ 290 ರೂ.ಗಳನ್ನು ಪಾವರಿಸಿ ಅಕ್ಕಿ ಖರೀದಿಸಿದರು. ಗೂಡ್ಸ್ ವಾಹನದಲ್ಲಿ ತುಂಬಿದ್ದ ಅಕ್ಕಿ ಚೀಲಗಳು ಖಾಲಿಯಾದರೂ ಜನ ಅಕ್ಕಿಗಾಗಿ ಕಾದು ನಿಂತಿದ್ದರು.
ಈ ವೇಳೆ ಬಿಜೆಪಿ ಕ್ಷೇತ್ರಾಧ್ಯಕ್ಷ ಎಲ್.ಅಶೋಕ್ ಮಾತನಾಡಿ, ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯ ಅಕ್ಕಿಗೂ 40 ರಿಂದ 50 ರೂ. ಇದೆ. ಕೇಂದ್ರ ಸರ್ಕಾರ ಕೇವಲ 29ರ ರೂ. ದರದಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವುದು ಬಡವರು ಮತ್ತು ಮಧ್ಯಮ ವರ್ಗಕ್ಕೆ ತುಂಬ ಅನುಕೂಲವಾಗಿದೆ. ಅಕ್ಕಿ ಗುಣಮಟ್ಟದಿಂದ ಕೂಡಿರುವ ಪರಿಣಾಮ ಜನರು ಖರೀದಿಸಲು ಮುಂದಾಗುತ್ತಿದ್ದಾರೆ. ಭಾರತ್ ಅಕ್ಕಿಗೆ ಎಲ್ಲ ಕಡೆ ಉತ್ತಮ ಸ್ಪಂಧನೆ ಸಿಕ್ಕಿದೆ ಎಂದರು.
ಬಿಜೆಪಿ ಮುಖಂಡರಾದ ರಾಜ್‌ಕುಮಾರ್, ಶ್ರೀನಿವಾಸ್ ನಾಯಕ, ತಾಪಂ ಮಾಜಿ ಸದಸ್ಯೆ ಮಂಗಳಾ, ಚಿಕ್ಕಮರಳಿ ನವೀನ್, ಎನ್.ಭಾಸ್ಕರ್, ಸೋಮಶೇಖರ್ ಇತರರು ಇದ್ದರು.