

ಲಕ್ಷ್ಮೇಶ್ವರ: ಸೋಮವಾರದಿಂದ ಲಾಕ್ಡೌನ್ ಸಡಿಲಿಕೆಯಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದರೂ ಬೆಳಗ್ಗೆ ಆರು ಗಂಟೆಗೇ ಪೇಟೆ ತುಂಬ ಜನರು ತುಂಬಿಕೊಂಡಿದ್ದರು.
ಬಟ್ಟೆ, ಪಾದರಕ್ಷೆ, ಮೊಬೈಲ್, ಬಾಂಡೆ ಮತ್ತಿತರ ಅಂಗಡಿಗಳನ್ನು ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ಶಿವಯೋಗಿ ಲೋಹಾರ ಬಂದ್ ಮಾಡಿಸಿದರು. ಆದರೂ ಮತ್ತೆ ಅಂಗಡಿಗಳು ತೆರೆದುಕೊಂಡಿದ್ದವು. ಗ್ರೇಡ್-2 ತಹಸೀಲ್ದಾರ್ ಎಸ್.ಆರ್. ಸಿದ್ದನಗೌಡ್ರ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮತ್ತು ಸಿಬ್ಬಂದಿ ಅನಗತ್ಯವಾಗಿ ತೆರೆದ ಅಂಗಡಿಗಳನ್ನು ಬಂದ್ ಮಾಡಿಸಿ, ದಂಡ ವಿಧಿಸಿದರು. ಅದಾದ ಕೆಲವೇ ನಿಮಿಷಗಳಲ್ಲಿ ಮಾಲೀಕರು ಅಂಗಡಿಗಳನ್ನು ತೆರೆದು ರಾಜಾರೋಷವಾಗಿ ವ್ಯಾಪಾರ-ವಹಿವಾಟು ಮಾಡಿದ್ದು ಕಂಡುಬಂತು. ಕೆಲವರು ಗ್ರಾಹಕರನ್ನು ಅಂಗಡಿ ಒಳಗೆ ಕಳಿಸಿ ಬಾಗಿಲು ಹಾಕಿ ಕದ್ದುಮುಚ್ಚಿ ವ್ಯಾಪಾರ ಮಾಡಿದರು.
ಮಾರ್ಗಸೂಚಿ ಉಲ್ಲಂಘಿಸಿದರೆ ದಂಡ: ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಅಂಗಡಿ ತೆರೆಯಲು ಅವಕಾಶವಿಲ್ಲ. ಅನಗತ್ಯವಾಗಿ ಅಂಗಡಿ ತೆರೆದವರಿಗೆ ಎಚ್ಚರಿಕೆ ನೀಡಿದ್ದೇವೆ. ಮಂಗಳವಾರ ಮತ್ತೆ ಅಂಥವರು ಅಂಗಡಿಗಳನ್ನು ತೆರೆದರೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮಾಸ್ಕ್ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಮಂಗಳವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಗ್ರೇಡ್-2 ತಹಸೀಲ್ದಾರ್ ಎಸ್.ಆರ್. ಸಿದ್ದನಗೌಡ್ರ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.
ಮಾಸ್ಕ್ ಧರಿಸದೆ ಖರೀದಿಯಲ್ಲಿ ಮಗ್ನ: ಸೆಮಿ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದಲ್ಲಿ ಸೋಮವಾರ ಹೆಚ್ಚು ಜನಸಂದಣಿ ಕಂಡುಬಂತು. ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಡೇರಿ ಮತ್ತು ಹಾಲು ಉತ್ಪನ್ನ ಮಾರಾಟ ಮಳಿಗೆ, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪರಿಕರ, ಯಂತ್ರೋಪಕರಣಗಳು, ಬೀಜ, ರಸಗೊಬ್ಬರ ಮಾರಾಟ ಮಳಿಗೆಗಳು, ಬೀದಿಬದಿ ವ್ಯಾಪಾರಸ್ಥರು, ಮದ್ಯದಂಗಡಿ, ಚಿಲ್ಲರೆ ಅಂಗಡಿಗಳನ್ನು ತೆರೆಯಲು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸಮಯ ನಿಗದಿಪಡಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಇನ್ನುಳಿದ ಕೆಲವು ಅಂಗಡಿಗಳನ್ನು ತೆರೆಯಲಾಗಿತ್ತು. ಪೊಲೀಸರು ಅವುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು.
ನಿಗದಿತ ಸಮಯದಲ್ಲಿ ಪಟ್ಟಣದ ಸಮುಖ್ಯಬಜಾರ್, ಪ್ರಮುಖ ರಸ್ತೆಗಳಲ್ಲಿ ಜನರು, ವಾಹನಗಳ ಸಂಚಾರ ಹೆಚ್ಚು ಕಂಡುಬಂತು. ಕಿರಾಣಿ, ತರಕಾರಿ ಮತ್ತಿತರ ಅಂಗಡಿಗಳ ಮುಂದೆ ಜನರು ಪರಸ್ಪರ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದರು. ಅನೇಕ ಕಡೆಗಳಲ್ಲಿ ಕೆಲವರು ಮಾಸ್ಕ್ ಸಹ ಧರಿಸಿರಲಿಲ್ಲ.