

ಬಂಗಾರಪೇಟೆ: ತಾಲೂಕಿನ ಟೇಕಲ್ ಮಾರ್ಗದ ಬಳಿ ಗುರುವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಭಾರೀ ಸ್ಫೋಟದ ಶಬ್ದ ಕೇಳಿ ಬಂದಿದ್ದು, ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಇದೇ ಮಾದರಿಯ ಶಬ್ದ ಕಳೆದ 8ತಿಂಗಳ ಹಿಂದೆಯೂ ಕೇಳಿಬಂದಿತ್ತು. ಆದರೆ ಶಬ್ದದ ಮೂಲ ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಟೇಕಲ್ ಮಾರ್ಗದಲ್ಲಿ ಶಬ್ದ ಕೇಳಿ ಬಂದಿದ್ದರಿಂದ ಕ್ವಾರಿಯಲ್ಲಿ ಬಂಡೆಗಳಿಗೆ ಬ್ಲಾಸ್ಟ್ ಮಾಡಿರಬಹುದು ಎಂದು ತಿಳಿದಿದ್ದ ಜನರು ಹೋಗಿ ಪರಿಶೀಲಿಸಿದಾಗ ಯಾವುದೇ ಕ್ವಾರಿಯಲ್ಲಿ ಬ್ಲಾಸ್ಟ್ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಟೇಕಲ್ ಮಾರ್ಗದ ಒಂಬತ್ತುಗುಳಿ, ತ್ಯಾರನಹಳ್ಳಿ, ರಾಮಾಪುರ ಗ್ರಾಮಗಳ ಕಡೆ ಪೊಲೀಸರು ಶೋಧ ನಡೆಸಿದರೂ ಸಹ ಶಬ್ದದ ಮೂಲ ತಿಳಿದುಬಂದಿಲ್ಲ. ಬಂಗಾರಪೇಟೆ, ಮಾಲೂರು ತಾಲೂಕಿನ ವ್ಯಾಪ್ತಿಯಲ್ಲಿ ಈ ಸ್ಪೋಟಕ ಶಬ್ದ ಕೇಳಿಬಂದಿದ್ದು, ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ತ್ಯಾರನಹಳ್ಳಿ ಮತ್ತು ಟೇಕಲ್ ಸಮೀಪದ ಹುಣ್ಸಿಕೋಟೆ ಕೆರೆಯಲ್ಲಿ ಜೆಟ್ ಬಿದ್ದು ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು, ಬೇರೆ ಎಲ್ಲೋ ಬಿದ್ದಿರುವ ಹೆಲಿಕಾಪ್ಟರ್ ಚಿತ್ರವನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.
ಮೈನಿಂಗ್ನಲ್ಲಿ ನೀರು ನುಗ್ಗಿದಾಗ ಚಾನಲ್ನಲ್ಲಿರುವ ಗಾಳಿಯಿಂದ ಇಂತಹ ಶಬ್ದ ಕೇಳಿ ಬರುತ್ತದೆ. ಆದರೆ ಬಂಗಾರಪೇಟೆ ವ್ಯಾಪ್ತಿಯಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು ಶಬ್ದದ ಮೂಲ ತಿಳಿದು ಬಂದಿಲ್ಲ. ಹಲವರು ಜೆಟ್ ವಿಮಾನ ಬಿದ್ದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ತನಿಖೆ ನಡೆಸುತ್ತಿದ್ದೇವೆ. ಭೂಕಂಪನ ಸಂಭವಿಸಿರುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. | ಹೆಸರು ಹೇಳಲಿಚ್ಛಿಸದ ಅಧಿಕಾರಿ, ಮೈನಿಂಗ್ ಇಲಾಖೆ, ಬಂಗಾರಪೇಟೆ