ಕಿಕ್ಕೇರಿ ಕೃಷ್ಣಮೂರ್ತಿ ಗಾಯನಕ್ಕೆ ತಲೆತೂಗಿದ ಜನ: ಶ್ರೀರಂಗಪಟ್ಟಣ ದಸರಾದಲ್ಲಿ ಸುಗಮ ಸಂಗೀತದ ಮೋಡಿ

People were mesmerized by Kikkeri Krishnamurthy singing Mandya
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾದಲ್ಲಿ ಖ್ಯಾತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರ ಸುಗಮ ಸಂಗೀತಕ್ಕೆ ಜನರು ಮನಸೋತರು. ತಂಪಿನ ವಾತಾವರಣದಲ್ಲಿ ನಡೆದ ಗಾಯನ ಕಾರ್ಯಕ್ರಮ ಜನರನ್ನು ಮೋಡಿ ಮಾಡಿತು. ಇದಲ್ಲದೆ ಇಡೀ ಗಾಯನವನ್ನು ರೈತರಿಗೆ ಸಮರ್ಪಣೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ರೈತರ ಜೀವನಾಡಿ ಕಾವೇರಿ ನದಿಗೆ ನಮಿಸಿ ಸುಗಮ ಸಂಗೀತಕ್ಕೆ ಕೃಷ್ಣಮೂರ್ತಿ ಚಾಲನೆ ನೀಡಿದರು. ರಾಷ್ಟ್ರಕವಿ ಕುವೆಂಪು ರಚಿತ ಉಳುವ ಯೋಗಿಯ ನೋಡಲ್ಲಿ ಹಾಡಿನ ಗಾಯನ ರೋಮಾಂಚನಗೊಳಿಸಿತು. ನಂತರ ಪುರಂದರ ದಾಸರ ‘ದಾರಿ ಯಾವುದಯ್ಯ ವೈಕುಂಠಕ್ಕೆ, ದಾರಿ ತೋರಿಸಯ್ಯ ಹಾಡು ಭಕ್ತಿಪರವಶವಾಗುವಂತೆ ಮಾಡಿತು. ಜನರ ಕೋರಿಕೆಯ ಮೇರೆಗೆ ರಾಷ್ಟ್ರಕವಿ ಕುವೆಂಪು ಅವರ ಸತ್ಯಾವತಾರ ಗೀತೆ ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆಯೊಂದಿಗೆ ವಿಲೀನವಾಯಿತು. ಎಲ್ಲದರೂ ಇರು ಎಂತಾದರೂ ಇರು ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಶಿಶುನಾಳ ಷರೀಫರ ಸುಗ್ಗಿ ಮಾಡೋಣು ಬಾರವ್ವಾ, ದ.ರಾ.ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಕುರುಡು ಕಾಂಚಾಣ ಕುಣಿಯುತಲಿತ್ತು, ಮಂಡ್ಯ ಜಿಲ್ಲೆಯ ಹೆಮ್ಮೆಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಒಂದಿರುಳು ಕನಸಿನಲಿ ಮತ್ತಿತರ ಗೀತೆಗಳು ಜನಮನ ಗೆದ್ದಿತು. ಕೃಷ್ಣಮೂರ್ತಿ ಅವರಿಗೆ ಖ್ಯಾತ ಕಲಾವಿದರಾದ ಶಶಿಕಲಾ, ಪೂರ್ಣಿಮಾ, ಲಿಖಿತ್ ಕೃಷ್ಣ ಸಾಥ್ ನೀಡಿದರು. ಅಭಿಷೇಕ್, ರಾಮಪ್ರಸಾದ್ ತಂಡದ ವಾದ್ಯ ಸಹಕಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದು, ಓದಿದ ನಾನು ಮಹಾನ್ ಗಾಯಕ ಡಾ.ಸಿ.ಅಶ್ವಥ್ ಅವರ ಗರಡಿಯಲ್ಲಿ ಸಂಗೀತದ ಅಭ್ಯಾಸ ಮಾಡಿದೆ. ಶ್ರೀರಂಗಪಟ್ಟಣ ದಸರಾ ನನಗೆ ಸದಾ ನೆನಪಿನಲ್ಲಿರುತ್ತದೆ. ಕಾರಣ ಸಿ.ಅಶ್ವಥ್ ತೀರಿಕೊಳ್ಳುವುದಕ್ಕೆ ಮುನ್ನ ಇದೇ ಶ್ರೀರಂಗಪಟ್ಟಣ ದಸರಾ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಗಿತ್ತು. ಅದನ್ನು ನೋಡಿದಾಗಲೆಲ್ಲ ಈ ದಸರಾ ನೆನಪು ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ಶ್ರೀರಂಗಪಟ್ಟಣವನ್ನು ಮರೆಯುವಂತಿಲ್ಲ. ಡಾ.ಕಿಕ್ಕೇರಿ ಕೃಷ್ಣಮೂರ್ತಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net