ದಲಿತರಿಗೆ ಅರ್ಥವಾಗಿದೆ ಕಾಂಗ್ರೆಸ್ ಅಪಪ್ರಚಾರ : ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿಕೆ

chalavadi narayanswami
Published on

ಉಡುಪಿ: ಬಿಜೆಪಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ, ಅಧಿಕಾರಕ್ಕೆ ಬಂದರೇ ಸಂವಿಧಾನವನ್ನು ಬದಲಾಯಿಸುತ್ತದೆ, ಮೀಸಲಾತಿಯನ್ನು ತೆಗೆದುಬಿಡುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿ ದಲಿತರ ಮತ ಸೆಳೆಯುತ್ತಿತ್ತು. ಆದರೇ ಇದೆಲ್ಲ ಸುಳ್ಳು ಎಂಬುದು ದಲಿತರಿಗೆ ಅರ್ಥ ಆಗಿದೆ. ಆದ್ದರಿಂದಲೇ ದಲಿತರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏಪ್ರಿಲ್ ತಿಂಗಳಲ್ಲಿ ಪರಿವರ್ತನಾ ಮಾಸಾಚರಣೆ ಅಂಗವಾಗಿ ದಲಿತರ ಹಾಸ್ಟೇಲ್, ಕೇರಿ, ಸಮುದಾಯ ಭವನಗಳಲ್ಲಿ ನವೀಕರಣ, ಸ್ವಾಸ್ಥ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಮೀಸಲಾತಿ ತಪ್ಪಲ್ಲ: ಇತರ ಸಮುದಾಯದವರು ಮೀಸಲಾತಿಗೆ ಆಗ್ರಹಿಸುವುದರಲ್ಲಿ ತಪ್ಪಿಲ್ಲ. ದಲಿತರಿಗೆ ಈಗಾಗಲೇ ಸಂವಿಧಾನಾತ್ಮಕವಾಗಿ ಮೀಸಲಾತಿ ನೀಡಿರುವುದರಿಂದ ಇದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇತರ ವರ್ಗಕ್ಕೆ ಶಾಸನಾತ್ಮಕವಾಗಿ ಮೀಸಲಾತಿ ನೀಡಬಹುದು. ಮೀಸಲಾತಿ ಬಗ್ಗೆ ವರದಿ ನೀಡಲು ಸರ್ಕಾರ ಹಿಂದುಳಿಗ ವರ್ಗಗಳ ಆಯೋಗದ ಸಮಿತಿ ರಚಿಸಿದೆ. ಅದರ ವರದಿ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

ಜಿಪಂ ಅಧ್ಯಕ್ಷ ದಿನಕರ ಬಾಬು, ಮೋರ್ಚಾ ಕೋಶಾಧಿಕಾರಿ ನಾಗೇಶ್ ದೇವನಹಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಅಮ್ಟೂರು, ಮುಖಂಡರಾದ ರವಿ ಅಮೀನ್, ನಳಿನಿ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

ಏಪ್ರಿಲ್ 14ರಂದು ಪಾದಯಾತ್ರೆ: ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಏ.14ರಂದು ರಾಜ್ಯದ 310 ಬಿಜೆಪಿ ಮಂಡಲಗಳಲ್ಲಿ ಕನಿಷ್ಠ 2 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ನಂತರ ಆಯಾ ಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಹಾಗೂ ಸಭೆ ಆಯೋಜಿಸಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net