

ಹನೂರು: ತಾಲೂಕಿನಲ್ಲಿ ಈ ವರ್ಷ ಬೇಸಿಗೆ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ದಾಹವನ್ನು ನೀಗಿಸಿಕೊಳ್ಳಲು ಎಳನೀರು ಹಾಗೂ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಕಳೆದ ವರ್ಷ ಈ ವೇಳೆ ಚಳಿಯಿಂದ ಕೂಡಿದ ಸಾಧಾರಣಾ ವಾತವರಣವಿತ್ತು. ಬಿಸಿಲಿನ ತಾಪ ಅಷ್ಟಾಗಿ ಇರಲಿಲ್ಲ. ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, 38 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದು, ಹೈರಾಣಾಗಿದ್ದರು. ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿತ್ತು. ಬಹುತೇಕ ಕೆರೆಗಳು, ಹಳ್ಳಕೊಳ್ಳ ಹಾಗೂ ಝರಿಗಳು ಬತ್ತಿ ಹೋಗಿದ್ದವು. ಇದರಿಂದ ಅಂತರ್ಜಲ ಮಟ್ಟ ಕುಸಿದು ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಜನರು ಬಿಂದಿಗೆ ನೀರಿಗೂ ಅಲೆದಾಡುವಂತಾಗಿತ್ತು. ಜತೆಗೆ ಜಾನುವಾರುಗಳಿಗೆ ಮೇವು ಹಾಗೂ ನೀರನ್ನು ಪೂರೈಸಲು ರೈತರು ಇನ್ನಿಲ್ಲದ ಕಷ್ಟವನ್ನು ಅನುಭವಿಸಿದ್ದರು. ಬಳಿಕ ಉತ್ತಮ ಮಳೆಯಾದ್ದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು.
ಸಾಮಾನ್ಯವಾಗಿ ಮಾರ್ಚ್‌ನಿಂದ ಮೇವರೆಗೆ ಬೇಸಿಗೆ ಕಾಲ ಇರುತ್ತದೆ. ಆದರೆ ತಾಲೂಕಿನಲ್ಲಿ ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಭಾನುವಾರ ಮಧ್ಯಾಹ್ನದ ಹೊತ್ತಿಗೆ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದರಿಂದ ಜನರು ಬಿಸಿಲಿನ ಬೇಗೆಗೆ ಒಳಗಾಗಿದ್ದು, ನೆರಳಿನ ಪ್ರದೇಶವನ್ನು ಹುಡುಕಿಕೊಳ್ಳುವಂತಾಗಿದೆ. ಜತೆಗೆ ದಾಹವನ್ನು ನೀಗಿಸಿಕೊಳ್ಳಲು ಎಳನೀರು, ಕಲ್ಲಂಗಡಿ, ಸೌತೆಕಾಯಿ, ಹಣ್ಣು ಹಂಪಲುಗಳ ಸೇವನೆ ಹಾಗೂ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಬೇಡಿಕೆಯಿಂದ ದರವೂ ಹೆಚ್ಚಾಗಿದೆ. ಎಳನೀರಿಗೆ ಇನ್ನಿಲ್ಲದ ಬೇಡಿಕೆ ನಿರ್ಮಾಣವಾಗಿದ್ದು, ಪಟ್ಟಣದಲ್ಲಿ ಮಧ್ಯಾಹ್ನದ ಹೊತ್ತಿಗೆ ಎಳನೀರು ಸಿಗದಂತಾಗಿದೆ.
ಸಾಮಾನ್ಯ ದಿನಗಳಲ್ಲಿ 30 ರೂ.ಗೆ ಮಾರಾಟವಾಗುತ್ತಿದ್ದ ಎಳನೀರಿನ ದರ 50 ರೂ.ಗೆ ಏರಿಕೆಯಾಗಿದೆ. ಬೇಸಿಗೆಯೂ ಮುನ್ನವೇ ತಾಪಮಾನ ಹೆಚ್ಚಾಗಿರುವುದರಿಂದ ಇನ್ನು ಬೇಸಿಗೆ ವೇಳೆ ಬಿಸಿಲಿನ ಬೇಗೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಜನರನ್ನು ಕಾಡುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ತಾಪಮಾನದ ಏರಿಕೆ ಹೆಚ್ಚಾಗುವ ಸಾಧ್ಯತೆ ಇದೆ.