ಟೀಕೆಯಲ್ಲಿ ಕಾಲ ಕಳೆಯದೆ ಸ್ವಾವಲಂಬಿಗಳಾಗಲು ಎಸಿ ಡಾ.ನಾಗರಾಜ್ ಸಲಹೆ

Dharmastala Graamabhivruddhi yojane
Published on

ಚಿಕ್ಕಮಗಳೂರು: ನಾವು ಬಡವರು, ನಮಗೆ ಸರ್ಕಾರ ಏನು ಮಾಡಿಲ್ಲ ಎಂದು ಟೀಕೆ ಮಾಡುತ್ತ ಕಾಲಹರಣ ಮಾಡುವ ಬದಲು ಸ್ವಾವಲಂಬಿಗಳಾಗಿ ಬದುಕುವ ಛಲ ಹೊಂದಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೆಲ್ಕೊ ಸೋಲಾರ್ ಲೈಟ್ ಸಹಯೋಗದೊಂದಿಗೆ ಶಾಂತಿನಗರ ಆಶ್ರಯ ಬಡಾವಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಉದ್ಯೋಗಕ್ಕಾಗಿ ಹಸಿರು ಇಂಧನ ಸಾಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ.19 ರಷ್ಟು ಬಡವರು

135 ಕೋಟಿ ಜನಸಂಖ್ಯೆ ಹೊಂದಿರುವ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನೀತಿ ಆಯೋಗದ ಪ್ರಕಾರ ಶೆ.19ರಷ್ಟು ಜನ ಬಡವರಿದ್ದಾರೆ. ಸ್ವಾತಂತ್ರ್ಯ ಬಂದ ಕಾಲದಲ್ಲಿ ದೇಶದಲ್ಲಿ ಶೇ.76ರಷ್ಟು ಬಡವರಿದ್ದರು. ಮೂರು ಹೊತ್ತು ಊಟ ಸಿಗದ ಪರಿಸ್ಥಿತಿ ಇತ್ತು. ಇಂದು ಹಾಗಿಲ್ಲ. ಯಾರಿಗೂ ಊಟ, ಬಟ್ಟೆಗೆ ತೊಂದರೆ ಇಲ್ಲ. ಹಸಿವಿನಿಂದ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಸರ್ಕಾರಗಳು ಉತ್ತಮ ಕೆಲಸ ಮಾಡುತ್ತಿವೆ. ಹಾಗಾಗಿ ದೊಡ್ಡ ಉದ್ಯಮಿಗಳಾಗಬೇಕೆಂದಿಲ್ಲ. ನಾವು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಛಲ ಹೊಂದಬೇಕು. ದೃಷ್ಟಿಯಂತೆ ಸೃಷ್ಟಿ, ಯಾರಿಗೆ ಮನಸಿರುತ್ತದೊ ಅವರು ಮಾತ್ರ ಮಾರ್ಗ ಸೃಷ್ಟಿಸಿಕೊಳ್ಳಬಲ್ಲರು ಎಂದರು.

ಧರ್ಮಸ್ಥಳ ಯೋಜನೆ ಶ್ಲಾಘನೀಯ

ಸರ್ಕಾರ ಅನುಷ್ಠಾನ ಮಾಡಿರುವ ಉತ್ತಮ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಕೊಂಚ ವೈಫಲ್ಯತೆ ಕಂಡಿರುವ ಕಾರಣ ಎಷ್ಟೊ ಸರ್ಕಾರಿ ಸೇವೆಗಳು ಸಮರ್ಪಕವಾಗಿ ಜಾರಿಯಾಗುವುದಿಲ್ಲ ಎಂಬ ದೋಷವಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ ಎಂದರು.

ಕೊರಗುವಂತಹ ಸ್ಥಿತಿ ಸಮಾಜದಲ್ಲಿದೆ

ಗ್ರಾಮಾಂತರ ವೃತ್ತ ನಿರೀಕ್ಷಕಿ ಸ್ವರ್ಣ ಮಾತನಾಡಿ, ಮಲೆನಾಡಿನಲ್ಲಿ ಮಳೆಗಾಲ ಆರಂಭವಾದರೆ ತಿಂಗಳುಗಟ್ಟಲೆ ವಿದ್ಯುತ್ ಇರುತ್ತಿರಲಿಲ್ಲ. ಮರಗಳು ಬಿದ್ದು ಊರಿಗೆ ಬರುವ ಬಸ್ ಸಂಚಾರ ಸ್ಥಗಿತವಾಗುತ್ತಿತ್ತು. ಶಾಲೆಗಳು ನಡೆಯುತ್ತಿರಲಿಲ್ಲ. ಅಂತಹ ಗ್ರಾಮದಲ್ಲಿ ನಾವು ಬೆಳೆದಿರುವುದು. ವಿದ್ಯಾರ್ಥಿ ಜೀವನದ ಸಂದರ್ಭ ಧರ್ಮಸ್ಥಳ ಸಂಘ ಇದ್ದಿದ್ದರೆ ಈ ಮಹತ್ವಗಳ ಬಗ್ಗೆ ಅರಿವಾಗುತ್ತಿರಲಿಲ್ಲ. ಈಗ ಎಲ್ಲ ರೀತಿಯ ಸೌಲಭ್ಯಗಳಿದ್ದರೂ ನಮಗಿಂತೆ ಉತ್ತಮರನ್ನು ನೋಡಿ ಕೊರಗುವಂತಹ ಪರಿಸ್ಥಿತಿ ಸಮಾಜದಲ್ಲಿದೆ ಎಂದರು.

ನಮಗಿಂತ ಕೆಳಗಿರುವವರನ್ನು ನೋಡಿ ಬದುಕಬೇಕು. ಉತ್ತಮರನ್ನು ನೋಡಿ ಅವರ ಜೀವನ ರೀತಿಯನ್ನು ರೂಢಿಸಿಕೊಳ್ಳಬೇಕೆಂದು ಯೋಚಿಸುತ್ತೇವೆ. ಆದರೆ ಸಣ್ಣ ಪ್ರಯತ್ನವನ್ನು ಸಹ ಮಾಡುವುದಿಲ್ಲ. ಹಲವು ವರ್ಷ ಕುಟುಂಬದ ಬಹಳಷ್ಟು ಸಮಾರಂಭಗಳನ್ನು ಬದಿಗೊತ್ತಿ ಹಗಲು ರಾತ್ರಿ ನಿದ್ರೆ ಇಲ್ಲದೆ ಶ್ರಮಪಟ್ಟು ಓದಿದ ಫಲವಾಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗಿದೆ ಎಂದರು.

ಆರ್ಥಿಕವಾಗಿ ಸದೃಢರಾಗಲು ಕ್ರಮ

ತಾಲೂಕು ಯೋಜನಾಧಿಕಾರಿ ಸುನೀತಾಪ್ರಭು ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿ ಕೃಷಿ, ಕೃಷಿಯೇತರ ಕಾರ್ಯಕ್ರಮ ಮಾಡಲಾಗಿದೆ. 2850 ಸ್ವಸಹಾಯ ಸಂಘದಲ್ಲಿ 26 ಸಾವಿರ ಸದಸ್ಯರಿದ್ದಾರೆ. ಆರ್ಥಿಕವಾಗಿ ಸದೃಢರಾಗಲು ಬ್ಯಾಂಕ್ ಮೂಲಕ ಸಾಲದ ವ್ಯವಸ್ಥೆ ಮಾಡಿ ಸ್ವಾವಲಂಬಿಗಳಾಗಿ ಬದುಕಲು ಸರ್ಕಾರಿ ಇಲಾಖೆ ಸಹಯೋಗದಲ್ಲಿ ಸ್ವಉದ್ಯೋಗಕ್ಕೆ ಪೂರಕವಾಗಿ ಸ್ಪಂದಿಸಲಾಗಿದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ್‍ರಾವ್, ಸೆಲ್ಕೊ ಸೋಲಾರ್ ಡಿಜಿಎಂ ಗುರುಪ್ರಕಾಶ್ ಶೆಟ್ಟಿ, ಬಿ.ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net