‘ಇ-ಖಾತಾ’ ಖ್ಯಾತೆಗೆ ಜನ ಸುಸ್ತು: ಎಆರ್‌ಒ ಕಚೇರಿಗಳಲ್ಲಿ ಹೆಲ್ಪ್‌ಡೆಸ್ಕ್ ಡೆಡ್​​

e khatha
Published on

ಆರ್​.ತುಳಸಿಕುಮಾರ್​

ಬೆಂಗಳೂರು: ರಾಜಧಾನಿಯಲ್ಲಿರುವ ಆಸ್ತಿ ಮಾಲೀಕರಿಗೆ ಇ-ಖಾತಾ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇ-ಆಸ್ತಿ’ಗೆ ಗ್ರಹಣ ಹಿಡಿದಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಅರೆಬರೆಯಾಗಿ ಅನುಷ್ಠಾನಕ್ಕೆ ತಂದ ಪರಿಣಾಮ, ಸಾರ್ವಜನಿಕರು ಡಿಜಿಟಲ್ ಖಾತಾ ಪಡೆಯಲು ಪರದಾಟ ಅನುಭವಿಸುತ್ತಿದ್ದಾರೆ. ಹೊಸ ತಂತ್ರಾಂಶದಲ್ಲಿನ ದೋಷದಿಂದಾಗಿ ಇ-ಖಾತಾ ಜನರೇಟ್ ಆಗದೆ ಆಸ್ತಿ ನೋಂದಣಿ ಪ್ರಕ್ರಿಯೆ ಆಮೆ ವೇಗದಲ್ಲಿ ನಡೆದಿದೆ.

ನೋಂದಣಿ ಪ್ರಕ್ರಿಯೆಯಲ್ಲಿ ನಕಲಿ ಪ್ರಕರಣಗಳನ್ನು ತಡೆಗಟ್ಟಿ ದಾಖಲೆಗಳಿಗೆ ಸುರಕ್ಷತೆ ಹಾಗೂ ಸಾಚಾತನ ತಂದುಕೊಡುವುದು ಸರ್ಕಾರದ ಉದ್ದೇಶವಾಗಿದೆ. ಈ ಕಾರಣದಿಂದಾಗಿ ನೋಂದಣಿ ವೇಳೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾಲೀಕರಿಗೆ ಡಿಜಿಟಲ್ ಖಾತಾ ವರ್ಗಾವಣೆ ಆಗದೆ ಹೊಸದಾಗಿ ನೋಂದಣಿ ಆಗುತ್ತಿಲ್ಲ. ಪಾಲಿಕೆಯ ವಿವಿಧ ಕಂದಾಯ ಕಚೇರಿಗಳಲ್ಲಿ ಹಳೆಯ ದಾಖಲೆಗಳನ್ನು ಪರಾಮರ್ಶಿಸಿ ಇ-ಖಾತಾ ಜನರೇಟ್ ಮಾಡಿ ‘ಇ-ಆಸ್ತಿ’ ವ್ಯವಸ್ಥೆಗೆ ಅಳವಡಿಸುವ ಕಾರ್ಯ ಅಪೂರ್ಣವಾಗಿದೆ. ಈ ಒಂದು ಲೋಪ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ.

ಎಲ್ಲಿದೆ ಹೆಲ್ಪ್‌ಡೆಸ್ಕ್:

ಇ-ಖಾತಾ ಪಡೆಯುವ ಸಂಬಂಧ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ನಿವಾರಿಸಲು ಬಿಬಿಎಂಪಿಯ ಎಲ್ಲ ಎಆರ್‌ಒ ಕಚೇರಿಗಳಲ್ಲಿ ಹೆಲ್ಪ್‌ಡೆಸ್ಕ್ ಆರಂಭಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಇದನ್ನಾಧರಿಸಿ ಪಾಲಿಕೆ ಮುಖ್ಯ ಆಯುಕ್ತರು ಎಲ್ಲ ವಲಯಗಳ ಮುಖ್ಯಸ್ಥರಿಗೆ ಸಂದೇಶ ರವಾನಿಸಿದ್ದರು. ಈ ಸೂಚನೆ ಹೊರಬಿದ್ದು ವಾರ ಕಳೆದರೂ, ಈವರೆಗೂ ಹೆಲ್ಪ್‌ಡೆಸ್ಕ್ ಆರಂಭವಾಗಿಲ್ಲ. ಒಂದೇ ದಿನದಲ್ಲಿ ಇ-ಖಾತಾ ನೀಡುವ ವಾಗ್ದಾನವೂ ಈಡೇರಿಲ್ಲ. ಈ ಸೌಲಭ್ಯ ಪಡೆಯಲು ಆಗಮಿಸುವ ನಾಗರಿಕರಿಗೆ ‘ನಾಳೆ ಬಾ . . .’ ಎಂಬ ಮಾಹಿತಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ. ಇ-ಖಾತಾ ಸಿಗದೆ ಆಸ್ತಿ ನೋಂದಣಿ ಮಾಡಿಕೊಳ್ಳಲಾರದೆ ಜನರು ಪರಿತಪಿಸುವಂತಾಗಿದೆ.

‘ಬೆಂಗಳೂರು ಒನ್’ ಸೈಲೆಂಟ್​​:

ಇ-ಖಾತಾ ಪಡೆಯಲು ಆಸ್ತಿ ಮಾಲೀಕರು ಕೆಲವೊಂದು ದಾಖಲೆಗಳನ್ನು ನೀಡಬೇಕಿದೆ. ಅವುಗಳನ್ನು ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ವೆಬ್‌ಸೈಟ್ ಮೂಲಕ ಅಪ್‌ಲೋಡ್ ಮಾಡಿ ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿತ್ತು. ಇಲ್ಲೂ ಕೂಡ ಪೂರ್ಣ ದಾಖಲೆಗಳನ್ನು ನೀಡಹೋದಲ್ಲಿ, ನಮ್ಮಲ್ಲಿ ಇನ್ನೂ ಆ ಸೌಲಭ್ಯ ಆರಂಭವಾಗಿಲ್ಲ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿ ವಾಪಸ್ ಕಳುಹಿಸುತ್ತಿದ್ದಾರೆ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆಂಬ ಆಕ್ಷೇಪ ಕೇಳಿಬಂದಿದೆ.

ತಂತ್ರಾಂಶ ಮೇಲ್ದರ್ಜೆ ವಿಳಂಬ:

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಲು ಕಾವೇರಿ 2.0 ಹಾಗೂ ಪಾಲಿಕೆಯ ಇ-ಆಸ್ತಿ ಲಿಂಕ್ ಆಗಬೇಕು. ಈ ಪ್ರಕ್ರಿಯೆ ಆಗದಿದ್ದಲ್ಲಿ ಪಾಲಿಕೆ ಸಿದ್ಧಪಡಿಸಿರುವ ದಾಖಲೆಗಳನ್ನು ಅಪ್‌ಲೋಡ್ ಆಗದೆ ಇ-ಖಾತಾ ಜನರೇಟ್ ಆಗದು. ಈ ತಂತ್ರಾಂಶವನ್ನು ಪಾಲಿಕೆಯು ಖಾಸಗಿ ಕಂಪನಿಗೆ ನೀಡಿದ್ದು, ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಕೆಲವೊಂದು ದೋಷಗಳು ಕಾಣಿಸಿಕೊಂಡಿವೆ. ಇವುಗಳನ್ನು ನಿವಾರಿಸುವ ಯತ್ನ ನಡೆದಿದೆ. ಇದಾದ ಬಳಿಕ ಇ-ಖಾತಾ ಜನರೇಟ್ ಮಾಡುವ ವಿಧಾನವನ್ನು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ/ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಆ ಬಳಿಕವೇ ಇ-ಖಾತಾ ಪ್ರಕ್ರಿಯೆ ಚಾಲ್ತಿಗೆ ಬಂದು ಜನರಿಗೆ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಳೆಯಾಗದ ದಾಖಲೆ:

ಹಾಲಿ ಪಾಲಿಕೆಯ ಕಡತದಲ್ಲಿರುವ ಆಸ್ತಿಗಳ ಮಾಹಿತಿಯನ್ನು ಡಿಜಿಟಲ್ ರೂಪಕ್ಕೆ ಬದಲಾಯಿಸಲಾಗುತ್ತಿದೆ. ಈ ವೇಳೆ ಕಣ್ತಪ್ಪಿನಿಂದ ಹಲವು ಲೋಪಗಳು ನುಸುಳಿವೆ. ಇವು ಯಥಾವತ್ತಾಗಿ ಇ-ಖಾತಾ ದಾಖಲೆಯಲ್ಲಿ ನಮೂದಾಗಿ ಮತ್ತೆ ತಪ್ಪು ಪುನರಾವರ್ತನೆಯಾಗುತ್ತಿವೆ. ಉದಾಹರಣೆಗೆ ಆಸ್ತಿಯ ಮಾಲೀಕರ ಹೆಸರಿನ ಅಕ್ಷರಗಳು ತಪ್ಪಾಗಿ ನಮೂದಾಗಿವೆ. ಸ್ವತ್ತಿನ ವಿಳಾಸ, ಅಳತೆಯಲ್ಲಿ ವ್ಯತ್ಯಾಸವಾಗಿವೆ. ವಿದ್ಯುತ್ ಬಿಲ್‌ನ 10 ಅಂಕಿಯ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಬಾಡಿಗೆ ಮನೆಗಳಲ್ಲಿದ್ದಲ್ಲಿ ಆರ್.ಆರ್. ನಂಬರ್ ನಮೂದಿಗೆ ತಾಂತ್ರಿಕ ಅಡ್ಡಿ ಎದುರಾಗಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹಾಲಿ ಕೆಲಸ:

ವಿಲ್, ನ್ಯಾಸ ಪತ್ರ (ಟ್ರಸ್ಟ್ ಡೀಡ್), ಮದುವೆ ನೋಂದಣಿ, ಋಣಭಾರ ಪ್ರಮಾಣಪತ್ರ, ನಕಲು ಪ್ರತಿಗಳು, ಜಿಪಿಎ.

ಜನರಿಗೆ ಏನೆಲ್ಲ ಸಮಸ್ಯೆ:

* ಆಸ್ತಿ ಖರೀದಿ ಮಾಡುವವರಿಗೆ ಸ್ವತ್ತುದಾರರಾಗಲು ವಿಳಂಬ

* ಆಸ್ತಿ ಮಾರಾಟಗಾರರು ಹಣ ಪಡೆದು ನೋಂದಣಿ ಮಾಡಿಕೊಡುತ್ತಿಲ್ಲವೆಂಬ ಅಪವಾದ

* ಸಹೋದರರು ಆಸ್ತಿ ಪಾಲು ಮಾಡಿಕೊಂಡು ನೋಂದಣಿ ಮಾಡಿಕೊಳ್ಳಲಾಗುತ್ತಿಲ್ಲ

* ಮಕ್ಕಳ ಹೆಸರಿನಲ್ಲಿ ಆಸ್ತಿ ಖರೀದಿಸಿ ನೋಂದಣಿ ಮಾಡಲು ವಿಳಂಬ

ನಮ್ಮ ಫ್ಲ್ಯಾಟ್ ಒಂದನ್ನು ಖರೀದಿಸಲು ಅಡ್ವಾನ್ಸ್ ನೀಡಿ ತಿಂಗಳಾಗಿದೆ. ಖರೀದಿದಾರರಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾಗಿ 2 ತಿಂಗಳಾಗಿದ್ದು, ಸಿಂಗಪುರದಿಂದ ಇಂದು ಬೆಂಗಳೂರಿಗೆ ಬರಲಿದ್ದಾರೆ. ಇ-ಖಾತಾಗೆ ಅರ್ಜಿ ಹಾಕಿ 15 ದಿನಗಳೇ ಕಳೆದರೂ ಈವರೆಗೂ ಸಿಕ್ಕಿಲ್ಲ. ಇನ್ನೂ ಕೆಲ ದಿನ ಕಾಯಿಸಿ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಫ್ಲ್ಯಾಟ್ ನೋಂದಣಿ ಆಗದೆ ಖರೀದಿದಾರರು ವಾಪಸ್ ಹೋಗುವುದಿಲ್ಲವೆಂದು ಹೇಳಿದರೆ ನಾನೇನು ಮಾಡಲಿ.

- ಜಾರ್ಜ್ ಸ್ಟೀನ್, ಆಸ್ತಿ ಮಾಲೀಕ, ಹೆಬ್ಬಾಳ ಕೆಂಪಾಪುರ

ಆಸ್ತಿಗಳಿಗೆ ಇ-ಖಾತಾ ನೀಡುವ ವಿಧಾನ ಸರಿ ಇದೆ. ಆದರೆ, ಈ ವ್ಯವಸ್ಥೆಯನ್ನು ಮೊದಲೇ ಪೂರ್ಣಗೊಳಿಸಿ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ, ಆತುರವಾಗಿ ಜಾರಿ ಮಾಡಿದ ಕಾರಣ ಜನರು ಬವಣೆಗೆ ಒಳಗಾಗಿದ್ದಾರೆ. ಪಾಲಿಕೆಯವರು ಇ-ಖಾತಾ ಜನರೇಟ್ ಮಾಡಿಕೊಳ್ಳಲು ವಿಲವಾಗಿರುವ ಕಾರಣ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡು ಸರ್ಕಾರಕ್ಕೆ ನಷ್ಟವಾಗಿದೆ.

- ಎಸ್.ಅ​ಮರೇಶ್, ವ್ಯವಸ್ಥಾಪಕ ಟ್ರಸ್ಟಿ, ಮಾಹಿತಿಹಕ್ಕು ಅಧ್ಯಯನ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net