

ಪ್ರಶಾಂತ ಭಾಗ್ವತ, ಉಡುಪಿ
ನಗರಸಭೆಯ ವ್ಯಾಪ್ತಿಗೊಳಪಡುವ ಮೂಡಸಗ್ರಿ ಗ್ರಾಮದಲ್ಲಿ ಪೆರಂಪಳ್ಳಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಇರುವುದೇ ಇದೀಗ ಶಾಪವಾಗಿ ಪರಿಣಮಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಕೆಲವರು ತಮ್ಮ ಮನೆಯ ಕಸ, ತ್ಯಾಜ್ಯ ಎಸೆಯುತ್ತಿದ್ದು, ಇಲ್ಲಿನ ಸುಂದರ ಪರಿಸರ ಹದಗೆಟ್ಟಿದೆ.
ತಾವು ಮಾಡುತ್ತಿರುವ ಕಾರ್ಯ ತಪ್ಪೆಂದು ತಿಳಿದಿದ್ದರೂ, ಸುಶಿತರಾಗಿದ್ದರೂ ಸಹ ಅನೇಕರು ರಾತ್ರಿ ವೇಳೆಯಲ್ಲಿ ಕದ್ದುಮುಚ್ಚಿ ಈ ಮಾರ್ಗದ ಹಲವೆಡೆ ಕಸ ಎಸೆಯುತ್ತಿದ್ದಾರೆ. ಉದ್ಯೋಗದ ನಿಮಿತ್ತ ಬೆಳಗ್ಗೆ ಈ ರಸ್ತೆಯಲ್ಲಿ ಕಾರು, ಬೈಕ್ಗಳ ಮೂಲಕ ತೆರಳುವ ಅನ್ಯ ಊರಿನವರೂ ಸಹ ತ್ಯಾಜ್ಯ ಚೆಲ್ಲಿ ಸಾಗುತ್ತಾರೆ.
ನಗರಸಭೆಯವರು ನಿತ್ಯ ಕಸ ವಿಲೇವಾರಿ ಮಾಡುತ್ತಿದ್ದರೂ ಸಹ ಅನೇಕ ವಾರ್ಡ್ಗಳಿಗೆ ಕಸದ ವಾಹನ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲವು ವಾರ್ಡ್ಗಳಿಗೆ ವಾರದಲ್ಲಿ ಮೂರುದಿನ, ಎರಡುದಿನ ಮಾತ್ರ ಕಸ ಸಂಗ್ರಹಣೆಗೆ ವಾಹನ ಬರುತ್ತಿದ್ದು, ಜನರು ಮನೆಯಲ್ಲಿನ ಕಸವನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ. ಸಗ್ರಿ-ಪೆರಂಪಳ್ಳಿ ಕೂಡು ರಸ್ತೆಯಲ್ಲಿ ಕಸದ ರಾಶಿಯೇ ಇದ್ದರೂ ಸಹ ವಿಲೇವಾರಿ ಮಾಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಗ್ರಿ-ಪೆರಂಪಳ್ಳಿ ಕೂಡುರಸ್ತೆಯ ಮಾರ್ಗವೆಂದರೆ ಕಸ ಎಸೆಯುವ ತಾಣವಾಗಿ ಮಾರ್ಪಟ್ಟಿದೆ. ಸಗ್ರಿ ಪ್ರಾಥಮಿಕ ಶಾಲೆಯ ನಂತರದ ರಸ್ತೆ ಕಸದ ಕೊಂಪೆಯಾಗಿದೆ. ಕಸವನ್ನು ಸಾಲಾಗಿ ಪ್ರದರ್ಶನಕ್ಕೆ ಇಟ್ಟಂತೆ ತೋರುತ್ತದೆ. ಜನರ ಮನಸ್ಥಿತಿ ಎಷ್ಟು ಕೆಟ್ಟಿದೆ ಎನ್ನುವುದಕ್ಕೆ ಈ ರೀತಿ ರಸ್ತೆಯಲ್ಲಿ ಕಸ ಎಸೆಯುತ್ತಿರುವುದೇ ನಿದರ್ಶನವಾಗಿದೆ. ನಗರಸಭೆ ಅಧಿಕಾರಿಗಳು ಕಸ ಎಸೆಯುವವರಿಗೆ ದಂಡ ಹಾಕಿದರೆ ಸಾಲದು, ಅವರಿಗೆ ಜೈಲುಶಿಕ್ಷೆಯಾಗುವಂತಹ ಕಾನೂನು ಅಳವಡಿಸಬೇಕು. | ಉಮೇಶ್ ನಾಯಕ್. ಮಾಜಿ ಅಧ್ಯಕ್ಷ, ನಮ್ಮೂರ ಗೆಳೆಯರ ಬಳಗ, ಸಗ್ರಿ ಸ್ವಚ್ಛತೆಯಲ್ಲಿ ಉಡುಪಿ ದೇಶದಲ್ಲಿಯೇ ಗಮನ ಸೆಳೆದ ನಗರವಾಗಿತ್ತು. ಆದರೆ, ಇಲ್ಲಿನ ಸುಶಿತ ನಾಗರಿಕರೇ ಮನೆಯ ಕಸವನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಎಸೆಯುವ ಮೂಲಕ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ನಗರಸಭೆಯವರು ಈ ಮಾರ್ಗದಲ್ಲಿ ಕಸ ಎಸೆಯದಂತೆ ಲಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರೂ ಸಹ ನಗರಸಭೆಯ ವಾಹನಕ್ಕೇ ಕಸ ನೀಡುವ ಮೂಲಕ ಪರಿಸರದ ಸ್ವಚ್ಛತೆ ಕಾಪಾಡಬೇಕು. | ಹೇಮನಾಥ್ ಹೆಗ್ಡೆ. ಬೂತ್ ಅಧ್ಯಕ್ಷ, ಸಗ್ರಿ 19ನೇ ವಾರ್ಡ್ ಎಷ್ಟೇ ಕ್ರಮ ಕೈಗೊಂಡರೂ ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಕೆಲವರು ಕಸ ಎಸೆದು ಹೋಗುತ್ತಾರೆ. ಹೀಗಾಗಿ ಸಗ್ರಿ ಶಾಲೆಯ ಮಾರ್ಗದಲ್ಲಿ ಕೆಲದಿನಗಳ ಮಟ್ಟಿಗೆ ಕ್ಯಾಮರಾ ಅಳವಡಿಸುವಂತೆ ಹಾಗೂ ಕಸ ಎಸೆಯದಂತೆ ಎಚ್ಚರಿಕೆ ಮೂಡಿಸಲು ಶಾಶ್ವತವಾದ ಲಕ ಅಳವಡಿಸುವಂತೆಯೂ ನಗರಸಭೆಗೆ ವಿನಂತಿಸಿದ್ದೇನೆ. | ಭಾರತಿ ಪ್ರಶಾಂತ್. ನಗರಸಭೆ ಸದಸ್ಯೆ, ಸಗ್ರಿ ವಾರ್ಡ್