ಜನರು ಕಲುಷಿತ ನೀರು ಸೇವಿಸದಂತೆ ನಿಗಾವಹಿಸಿ

30 HRP 01
ಹರಪನಹಳ್ಳಿ ತಾಪಂ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ ಮಾತನಾಡಿದರು. ತಹಸೀಲ್ದಾರ್ ಬಿ ವಿ ಗಿರೀಶ ಬಾಬು, ಇಒ ಚಂದ್ರಶೇಖರ್ ವೈ ಎಚ್ ಇದ್ದರು.
Published on

ಹರಪನಹಳ್ಳಿ: ವಿವಿಧ ಗ್ರಾಮಗಳ ರಸ್ತೆ ಬದಿಯಲ್ಲೇ ತಿಪ್ಪೆ ಹಾಕಲಾಗಿದ್ದು ಇವುಗಳನ್ನು ತೆರವುಗೊಳಿಸಲು ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ಪಿಡಿಒ ಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆಯ ಅರಿವು ಕಡಿಮೆ. ತಿಪ್ಪೆಗಳನ್ನು ಕಡ್ಡಾಯವಾಗಿ ತೆರವುಗೊಳಿಸುವಂತೆ ಹಲವು ಬಾರಿ ಸೂಚಿಸಿದರೂ ಪ್ರಯೋಜನವಾಗಿಲ್ಲ. ನಿಮ್ಮಿಂದ ಆಗದಿದ್ದರೆ ನಾನೇ ಖುದ್ದಾಗಿ ಬಂದು ಜೆಸಿಬಿ ಮೂಲಕ ತೆರವುಗೊಳಿಸುತ್ತೇನೆ. ತಿಪ್ಪೆ ಪಕ್ಕದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಜನರು ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.

ಟಿ ತುಂಬಿಗೆರೆ ಗ್ರಾಮದಲ್ಲಿ ಮನೆಯ ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದರಿಂದ ಮನೆಯಲ್ಲಿ ಇಲಿಗಳ ವಾಸದಿಂದ ಇಲಿ ಜ್ವರ ಬಂದು ಇಬ್ಬರು ಮತಪಟ್ಟಿದ್ದಾರೆ. ಗ್ರಾಮಗಳನ್ನು ಸ್ವಚ್ಛವಾಗಿಡಲು ದಿನ ಬಿಟ್ಟು ದಿನ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಈ ಬಗ್ಗೆ ಆಶಾ ಕಾರ್ಯಕರ್ತೆಯರನ್ನು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾಳಜಿವಹಿಸಬೇಕು.

ನಂದ್ಯಾಲ ಗ್ರಾಮದ ರಸ್ತೆಯಲ್ಲಿಯೇ ಜಾನುವಾರುಗಳು ಮಲಗುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಪಿಡಿಒ ಭೋಜಪ್ಪನಿಗೆ ಸೂಚಿಸಿದರು.

ಹಲವಾರು ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ, ಭೇದಿಯಂತ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ ಅದರ ಬಗ್ಗೆ ಆರೋಗ್ಯ ಇಲಾಖೆಯ ನಿಗಾವಹಿಸಬೇಕು ಎಂದರು.

ನೀರಾವರಿ ಇಲಾಖೆ ಇಂಜಿನೀಯರ್ ಕಿರಣ್ ನಾಯ್ಕ ಮಾತನಾಡಿ, ತಾಲೂಕಿನ ಒಳ ತಾಂಡ ಗ್ರಾಮದಲ್ಲಿ ಇತ್ತೀಚೆಗೆ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಶುದ್ಧ ನೀರಿನ ಘಟಕವಿದ್ದರೂ ಮಳೆಯಿಂದ ಹೊಲ ಗದ್ದೆಗಳಲ್ಲಿ ನಿಂತ ನೀರನ್ನು ಕುಡಿದಿದ್ದಾರೆ. ಈ ರೀತಿಯ ಪ್ರಕರಣಗಳನ್ನು ತಡೆಯಲು ಸಾಕಷ್ಟು ಪ್ರಯತ್ನ ದಲ್ಲಿದ್ದೇವೆ ಎಂದರು.

ಕಳೆದ ಬಾರಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಕಡಿಮೆ ಫಲಿತಾಂಶ ಬಂದಿರುವ 16 ಶಾಲೆಗಳು ಫಲಿತಾಂಶ ಸುಧಾರಣೆ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದರು.

ತಾಲೂಕಿನ ತೆಲಿಗಿ ಹಾಗೂ ನಿಟ್ಟೂರು ಗ್ರಾಮದ ಶಾಲೆಗಳು ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಲ್ಲಿ ಮಕ್ಕಳನ್ನು ತರಕಾರಿ ತರಲು ಮತ್ತು ಮಕ್ಕಳಿಂದ ಇತರೆ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ಮಕ್ಕಳ ಶಿಕ್ಷಣ ಕುಂಟಿತವಾಗುತ್ತಿದ್ದು, ಅಂತಹ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

ತಾಪಂ ಸಹಾಯಕ ನಿರ್ದೇಶಕ ಸೋಮಶೇಖರ ಹಾಗೂ ವೀರಣ್ಣ ಲಕ್ಕಣ್ಣನವರ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ತಾಲೂಕು ವೈದ್ಯಾಧಿಕಾರಿ ಪೃಥ್ವಿ, ಶಂಕರ ನಾಯ್ಕ, ಕೃಷಿ ಸಹಾಯಕ ನಿರ್ದೇಶಕ ವಿ ಸಿ ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net