

ಮರಿದೇವ ಹೂಗಾರ ಹುಬ್ಬಳ್ಳಿ
ಮಾ…ಮುಝೆ ಬಾಹರ್ ಛೋಡ್ ದೋ (ಅಮ್ಮಾ… ಹೊರಗಡೆ ಹೋಗಲು ಬಿಡು)…
ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಕಿಮ್್ಸ) ಏ. 13ರಂದು ಕರೊನಾ ಸೋಂಕಿತರಾಗಿ ದಾಖಲಾದ ಮೂವರು ಮಕ್ಕಳ ಅಳಲು ಇದು.
ನಗರದ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ (ಪಿ-194) ಸೋಂಕು ತಗುಲಿರುವುದು ದೃಢವಾಗಿತ್ತು. ನಂತರ ಆತನ ಸಹೋದರ ಹಾಗೂ ಸಹೋದರನ ಮೂವರು ಮಕ್ಕಳಿಗೂ ಸೋಂಕು ತಗುಲಿದ್ದು, ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 3.6 ಹಾಗೂ 5 ವರ್ಷದ ಗಂಡು ಮಕ್ಕಳು, 7 ವರ್ಷದ ಹೆಣ್ಣು ಮಗು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮನೆಯಲ್ಲಿ ಸ್ವಚ್ಛಂದವಾಗಿ ಆಟವಾಡಿಕೊಂಡಿದ್ದ ಈ ಮಕ್ಕಳಿಗೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡಿರುವುದು ಬಹಳ ಕಷ್ಟವಾಗುತ್ತಿದೆ.
ಆಟದ ಸಾಮಗ್ರಿ ಉಂಟು: ದೊಡ್ಡವರಿಗೇ ಸಮಯ ಕಳೆಯಲಾಗುವುದಿಲ್ಲ. ಅಂಥದ್ದರಲ್ಲಿ ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕುವುದು ಕಷ್ಟ. ಆದರೆ, ಅನಿವಾರ್ಯ ಪರಿಸ್ಥಿತಿಯೂ ಇದೆ. ಹಾಗಾಗಿ ಮಕ್ಕಳು ವಾರ್ಡ್ನಲ್ಲಿಯೇ ಇರಲು ಪೂರಕವಾಗಿ ಆಟದ ಸಾಮಗ್ರಿಯನ್ನು ಮನೆಯಿಂದ ತಂದುಕೊಡಲಾಗಿದೆ. ಅವುಗಳೊಂದಿಗೆ ಆಟವಾಡುವ ಮಕ್ಕಳು, ಆಗೊಮ್ಮೆ ಈಗೊಮ್ಮೆ ‘ಅಮ್ಮಾ, ಹೊರಗಡೆ ಹೋಗೋಣ ನಡಿ’ ಎಂದು ಅಂಗಲಾಚುತ್ತಿರುವುದು ಹೆತ್ತವರ ಕರಳು ಹಿಂಡುವಂತೆ ಮಾಡುತ್ತಿದೆ.
ಪ್ರೋಟಿನ್ಯುುಕ್ತ ಆಹಾರ: ಮಕ್ಕಳಿಗೆ ಸೋಂಕು ತಗುಲಿದ್ದರೂ ಅಂಥ ರೋಗದ ಲಕ್ಷಣಗಳು ಕಂಡುಬರುತ್ತಿಲ್ಲ. ಆದ್ದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳಿಗಾಗಿಯೇ ಆಹಾರ ಪದ್ಧತಿಯನ್ನು ಹಾಕಿಕೊಳ್ಳಲಾಗಿದೆ. ಪ್ರೋಟಿನ್ಯುುಕ್ತ ಆಹಾರವನ್ನು ಮಕ್ಕಳು ಕೇಳಿದಂತೆಲ್ಲ ಕೊಡಲಾಗುತ್ತಿದೆ. ವೈದ್ಯರು ಬಂದು ಆಗಾಗ ಚಿಕಿತ್ಸೆ ನೀಡಿ ತೆರಳುತ್ತಿದ್ದಾರೆ.
ಸೋಂಕಿಲ್ಲದ ತಾಯಿಯಿಂದ ಆರೈಕೆ!: ಸೋಂಕಿತ ಮಕ್ಕಳಿಗೆ ತಾಯಿ ಆಸರೆ ಸಿಗಲೇಬೇಕು. ಹಾಗಾಗಿ ತಾಯಿಯನ್ನು ಮಕ್ಕಳೊಟ್ಟಿಗೆ ಬಿಡಲಾಗಿದೆ. ತಾಯಿಗೆ ಸೋಂಕು ತಗುಲಿಲ್ಲ. ಆದರೆ, ಸೋಂಕಿತ ಮಕ್ಕಳನ್ನು ಸಮಾಧಾನಿಸಲು ಅಲ್ಲಿಯೇ ಉಳಿದುಕೊಂಡಿದ್ದಾರೆ. ಇದು ನಿಜಕ್ಕೂ ಸ್ವಲ್ಪ ಸವಾಲಿನ ಕೆಲಸ. ಆದಾಗ್ಯೂ ವೈದ್ಯರು ತಾಯಿ-ಮಕ್ಕಳ ಅನುಬಂಧ ಅರ್ಥ ಮಾಡಿಕೊಂಡು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಆ ಮಹಿಳೆಯ ಸ್ವಯಂ ಸಂರಕ್ಷಣೆಗೆ ಮಾಸ್ಕ್ ಸೇರಿ ಇತರ ವೈದ್ಯಕೀಯ ಉಪಕರಣಗಳನ್ನು ನೀಡಲಾಗಿದೆ. ಹಾಗಾಗಿ, ಮಕ್ಕಳ ಲಾಲನೆ ಪಾಲನೆಯಲ್ಲಿ ಅವರು ಮಗ್ನರಾಗಿದ್ದಾರೆ. ಮಕ್ಕಳಿಗೆ ಸೋಂಕು ತಗುಲಿರುವುದು ಗೊತ್ತಿದ್ದೂ ಆ ತಾಯಿ ಮಕ್ಕಳೊಟ್ಟಿಗೆ ಇರುವುದು ‘ತಾಯಿ ಪ್ರೀತಿ’ಗೆ ಸಹ ಸಾಕ್ಷಿಯಾಗಿದೆ.