ಗದಗದಲ್ಲಿ ಎಂಎಸ್​ಐಎಲ್​ ಮಳಿಗೆ ಓಪನ್ ಇದೆ ಎಂದು ಓಡೋಡಿ ಬಂದ ಎಣ್ಣೆಪ್ರಿಯರಿಗೆ ಶಾಕ್​!

Gadag MSIL Que 1 APR 20
Published on

ಗದಗ: ಕರೊನಾ ಕಾರಣಕ್ಕೆ ಲಾಕ್​ಡೌನ್ ಆಗಿರುವುದರಿಂದಾಗಿ ಉಂಟಾಗಿರುವ ಸಂಕಷ್ಟ ಒಂದೇ ಎರಡೇ. ಹೊರಗೆ ಹೋದರೆ ಕಣ್ಣಿಗೆ ಕಾಣದ ವೈರಸ್​ನ ಭಯ. ಹೊರಗೆ ಕಾಲಿಟ್ಟು ವೈರಸ್ ಅಟ್ಯಾಕ್ ಆದರೆ ಮುಗೀತು, ಅದಕ್ಕೆ ಎಂದೇ ಔಷಧ ಇಲ್ಲದಿರುವ ಕಾರಣ ಪ್ರಾಣಕ್ಕೂ ಇಲ್ಲ ಗ್ಯಾರೆಂಟಿ. ಇನ್ನು ದೇಶಾದ್ಯಂತ ಸೋಂಕು ಹರಡದಂತೆ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣ ಮದ್ಯ, ಬೀಡಿ, ಸಿಗರೇಟು, ಗುಟ್ಖಾ, ಪಾನ್ ಪ್ರಿಯರ ಸಂಕಷ್ಟವೂ ಹೇಳತೀರದು. ಇವು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ಕಾರಣ ಅಂಗಡಿಗಳವರೂ ಇವುಗಳನ್ನು ಮಾರಾಟ ಮಾಡುತ್ತಿಲ್ಲ. ಮದ್ಯದಂಗಡಿಗಳೂ ಓಪನ್ ಇಲ್ಲ.

ಹಾಗಿರುವಾಗ, ಎಲ್ಲೋ ಒಂದು ಕಡೆ ಮದ್ಯದ ಅಂಗಡಿ ಓಪನ್ ಇದೆ ಎಂದೋ, ಬೀಡಿ, ಸಿಗರೇಟ್​, ಗುಟ್ಖಾ ಸಿಗುತ್ತಿದೆ ಎಂಬ ಸುದ್ದಿ ಬಂದರೆ ಸಾಕು, ಎಣ್ಣೆ ಪ್ರಿಯರು, ಪಾನ್​ ಪ್ರಿಯರು, ಗುಟ್ಖಾ, ಸಿಗರೇಟ್, ಬೀಡಿ ಪ್ರಿಯರ ಕಿವಿ ನೆಟ್ಟಗಾಗುವುದು ಅಷ್ಟೇ ಸಹಜ. ಗದಗದಲ್ಲಿ ಆಗಿದ್ದೂ ಇಂಥದ್ದೇ ಘಟನೆ. ಇಲ್ಲಿನ ಮುಳಗುಂದ ರಸ್ತೆಯ ಎಂ.ಎಸ್.ಐ.ಎಲ್ ಬುಧವಾರ ಓಪನ್ ಇರುತ್ತದೆ ಎಂಬ ಸುದ್ದಿ ನಿನ್ನೆಯಿಂದ ಓಡಾಡ್ತಾ ಇತ್ತು. ಹೀಗಾಗಿ ಬೆಳ್ಳಂಬೆಳಗ್ಗೆಯೇ ಈ ಮದ್ಯದ ಮಳಿಗೆ ಎದುರು ಜಮಾಯಿಸಿದ ಎಣ್ಣೆ ಪ್ರಿಯರು ಸರದಿ ನಿಂತಿದ್ದರು.

ಕುಡುಕರ ಸಾಲಿನಲ್ಲಿ ಮಹಿಳೆಯರೂ ಇದ್ರು, ವಯಸ್ಸಾದವರೂ ಇದ್ರು, ಯುವಕರೂ ಇದ್ರೂ, ಮಧ್ಯವಯಸ್ಕರೂ ಇದ್ರು. ಕಳೆದ ಒಂದು ವಾರದಿಂದ ಮದ್ಯ ಸಿಗದೇ ಇವರೆಲ್ಲ ಕಂಗಾಲಾಗಿದ್ದರು. ಸುಟ್ಟರೂ ಬಿಡದ ಈ ವ್ಯಸನದಿಂದಾಗಿ ಕಂಗೆಟ್ಟು ಹೋಗಿದ್ದರು. ಹೀಗಾಗಿ ಬುಧವಾರ ಏಪ್ರಿಲ್ 1 ಎಂಬ ಅರಿವೂ ಇವರಿಗೆ ಆಗಿರಲಿಲ್ಲ. ಜನ ಸರದಿ ನಿಂತ ಸುದ್ದಿ ಕೇಳಿ ಗದಗ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಕೂಡಲೇ, ಅಲ್ಲಿ ನಿಂತಿದ್ದವರೆಲ್ಲ ಕಾಲಿಗೆ ಬುದ್ಧಿ ಹೇಳಿ ಪರಾರಿಯಾದ್ರು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net