ಸಾಂಕ್ರಾಮಿಕ ರೋಗ ಉಲ್ಬಣದಿಂದ ತತ್ತರಿಸಿದ ಜನ

ಚಿಕ್ಕಬಳ್ಳಾಪುರದಲ್ಲಿ ಕಂಡು ಬರುವ ಅನೈರ್ಮಲ್ಯ ವಾತಾವರಣ.
7CBP7
ಚಿಕ್ಕಬಳ್ಳಾಪುರದಲ್ಲಿ ಕಂಡು ಬರುವ ಅನೈರ್ಮಲ್ಯ ವಾತಾವರಣ.
Published on


ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯ ಧೋರಣೆ ಸಲ್ಲ - ಕಾಯಿಲೆ ತಡೆಗೆ ಜಾಗೃತಿ ಅಗತ್ಯ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಮಳೆಗಾಲದಲ್ಲಿ ವಿವಿಧ ರೋಗಗಳ ಹರಡುವಿಕೆಗೆ ಜನ ಹೈರಾಣಾಗುತ್ತಿರುವ ನಡುವೆ ಸ್ಥಳೀಯ ಆಡಳಿತ ಸಂಸ್ಥೆಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದು, ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.
ಹೌದು! ಆರೋಗ್ಯ ಇಲಾಖೆಯಿಂದ ನಿರಂತರವಾಗಿ ಸಾಂಕ್ರಾಮಿಕ ಹರಡುವಿಕೆ ತಡೆಗೆ ಜಾಗೃತಿ, ಪ್ರಚಾರ ಬಿರುಸಿನಿಂದ ನಡೆಯುತ್ತಿವೆ. ಆದರೆ, ಆರೋಗ್ಯವನ್ನು ಹದಗೆಡಿಸುವ ಕಲುಷಿತ ನೀರು ಪೂರೈಕೆ, ಅನೈರ್ಮಲ್ಯ, ಸೊಳ್ಳೆಗಳ ಉತ್ಪತ್ತಿ ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳು ಮುಂದಾಗುತ್ತಿಲ್ಲ. ಇದಕ್ಕೆ ಆಡಳಿತ ಯಂತ್ರಾಂಗ ಚುರುಕಿನ ಅಗತ್ಯ ಕ್ರಮಕೈಗೊಳ್ಳಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ 4 ನಗರಸಭೆ, 1 ಪಟ್ಟಣ ಪಂಚಾಯಿತಿ, 1 ಪುರಸಭೆ ವ್ಯಾಪ್ತಿಯಲ್ಲಿ 158 ವಾರ್ಡುಗಳಿದ್ದು, 157 ಗ್ರಾಪಂವ್ಯಾಪ್ತಿಯಲ್ಲಿ 1515 ಗ್ರಾಮಗಳಿವೆ. ಇಲ್ಲಿನ ಬಹುತೇಕ ಪ್ರದೇಶಗಳಲ್ಲಿ ನೈರ್ಮಲ್ಯ ನಿರ್ವಹಣೆ ನೆಪಥ್ಯಕ್ಕೆ ಸರಿದಿದೆ. ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ಚರಂಡಿ ಕೊಳಚೆ ರಸ್ತೆಗೆ ಹರಿದು ಜಲಾವೃತಗೊಳ್ಳುವ ದೃಶ್ಯ ಕಂಡುಬರುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಮನೆ ಮನೆಗೂ ತೆರಳಿ ಪೌರ ಕಾರ್ಮಿಕರು ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸುತ್ತಿದ್ದರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ, ವಾರಗಟ್ಟಲೆ ಒಂದೆಡೆ ಕಸ ಸಂಗ್ರಹವಾಗಿದ್ದರೂ ವಿಲೇವಾರಿಗೆ ಕ್ರಮ ಕೈಗೊಳ್ಳದ ಪ್ರವೃತ್ತಿ ದೂರವಾಗುತ್ತಿಲ್ಲ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣವಾದ ಒಳಚರಂಡಿಗಳು ಮತ್ತು ಸಾಮಾನ್ಯ ಚರಂಡಿಗಳು, ಒಡೆದ ಪೈಪ್‌ಲೈನ್, ಬ್ಲಾಕ್ ಆಗುವ ಮ್ಯಾನ್‌ಹೋಲ್‌ಗಳ ಸಮಸ್ಯೆಯಿಂದ ಕುಡಿಯುವ ನೀರಿಗೆ ಕಲುಷಿತ ಮಿಶ್ರಣವಾಗುತ್ತಿದೆ. ಇವುಗಳನ್ನು ಸರಿಪಡಿಸುವುದಕ್ಕೆ ಆದ್ಯತೆ ನೀಡದೆ ಸಾಂಕ್ರಾಮಿಕ ತಡೆಗೆ ಪ್ರಚಾರ ಮಾತ್ರ ಸೀಮಿತವಾಗಿರುವುದರಿಂದ ಸಂಕಷ್ಟಗಳು ದೂರವಾಗುತ್ತಿಲ್ಲ.

ಡೆಂಘೆ ಪ್ರಕರಣ ಹೆಚ್ಚಳ
ಪ್ರಸ್ತುತ ಎಲ್ಲೆಡೆ ಮುಂಗಾರು ಮಳೆ ಬೀಳುತ್ತಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಸುದೀರ್ಘ ಕಾಲ ನೀರಿನ ಸಂಗ್ರಹದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯಾ ಸೇರಿ ನಾನಾ ಕಾಯಿಲೆಗಳ ಹರಡುವಿಕೆ ಕಂಡು ಬರುತ್ತಿದೆ. ಶಿಡ್ಲಘಟ್ಟದಲ್ಲಿ ಝೀಕಾ ವೈರಸ್ ಸೋಂಕಿತ ಸೊಳ್ಳೆಗಳು ಪತ್ತೆಯಾಗಿದ್ದವು. ಇದರಿಂದ ಹಲವು ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈಗ ಡೆಂಘೆ ಸಮಸ್ಯೆ ಬಾಧಿಸುತ್ತಿದೆ. ಜಿಲ್ಲೆಯಲ್ಲಿ 92 (ಜನವರಿಯಿಂದ ಇಲ್ಲಿಯವರೆಗೆ )ಡೆಂಘೆ ಪ್ರಕರಣ ವರದಿಯಾಗಿವೆ. ಬಾಗೇಪಲ್ಲಿ ತಾಲೂಕಿನಲ್ಲಿ 15, ಚಿಕ್ಕಬಳ್ಳಾಪುರ 26, ಚಿಂತಾಮಣಿ 14, ಗುಡಿಬಂಡೆ 3, ಗೌರಿಬಿದನೂರು 11 ಹಾಗೂ ಶಿಡ್ಲಘಟ್ಟದಲ್ಲಿ 23 ಪ್ರಕರಣಗಳು ಪತ್ತೆಯಾಗಿವೆ. ಜುಲೈನಲ್ಲಿ ಕಾಯಿಲೆ ದೃಢಪಡುವಂತಹವರ ಸಂಖ್ಯೆ ಏರಿಕೆಯಾಗುತ್ತಿದೆ.

ಇಲಾಖೆಗಳ ಸಮನ್ವಯ ಅಗತ್ಯ
ಸಾಂಕ್ರಾಮಿಕ ಹರಡುವಿಕೆಯ ಹೊಣೆಯನ್ನು ಆರೋಗ್ಯ ಇಲಾಖೆ ಮೇಲೆ ಹೊರಿಸಿದರೆ ಸಾಲದು, ಕಂದಾಯ, ಪಂಚಾಯತ್ ರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇರಿ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ.
ಸ್ಥಳೀಯ ಆಡಳಿತ ಸಂಸ್ಥೆಗಳ ಆಯಾ ವ್ಯಾಪ್ತಿಯಲ್ಲಿ ನೀರು ಸಂಗ್ರಹ ಮತ್ತು ಸೊಳ್ಳೆಗಳ ಉತ್ಪತ್ತಿ ತಾಣವನ್ನು ಪತ್ತೆ ಹಚ್ಚಿ ಸ್ವಚ್ಛತೆ ಕೈಗೊಳ್ಳಬೇಕು. ಹಾಗೆಯೇ ಕಾಲ ಕಾಲಕ್ಕೆ ಕಸದ ವಿಲೇವಾರಿಗೊಳಿಸಬೇಕು. ಸಮುದಾಯ ಆಧಾರಿತ ಜಾಗೃತಿ, ಸಮಸ್ಯಾತ್ಮಕ ಪ್ರದೇಶಗಳಲ್ಲಿ ಪರಿಹಾರ ಕೆಲಸಗಳಾಗಬೇಕು. ಹೆಚ್ಚಿಗೆ ಡೆಂಘೆ ಪ್ರಕರಣಗಳು ಮಕ್ಕಳಲ್ಲಿ ಕಂಡು ಬರುತ್ತಿರುವುದರಿಂದ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸವಲತ್ತು ಒದಗಿಸುವ ಜತೆಗೆ ಗುಣಮಟ್ಟದ ಚಿಕಿತ್ಸೆ ದೊರಕುವಂತಾಗಬೇಕು. ಹೀಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.


ಮಳೆಗಾಲದಲ್ಲಿ ಹೆಚ್ಚಿಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆ ಸಹಜ. ಇದಕ್ಕೆ ಅನುಗುಣವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಆಯಾ ವ್ಯಾಪ್ತಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಾಗ ಸಂಕಷ್ಟದ ಸಮಸ್ಯೆ ಕಾಡುವುದಿಲ್ಲ. ಆದರೆ, ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸುವುದರಿಂದ ಏನು ಪ್ರಯೋಜನವಾಗುವುದಿಲ್ಲ.
ವಿ.ರವಿಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net