ಯುಜನರೇ, ಜಾನಪದ ಕಲೆ ಉಳಿಸಿ

kdr sammelana
ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಜಿಲ್ಲಾ ಜಾನಪದ ಸಮ್ಮೇಳನವನ್ನು ಚಿಂತಕ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಕರಿಬಸಪ್ಪ, ಜಿ.ಬಿ.ಸುರೇಶ್, ಬಸವರಾಜ ನೆಲ್ಲಿಸರ, ಡಿ.ಪಿ.ರಾಜಣ್ಣ, ನಾಗೇಶ್, ಬಸಪ್ಪ, ತಿಪ್ಪೇಶಪ್ಪ ಇತರರಿದ್ದರು.
Published on

ಕಡೂರು: ಯುವಜನರು ಜನಪದ ಕಲೆ ಕಲಿತರೆ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಜಾನಪದ ಸಮ್ಮೇಳನಾಧ್ಯಕ್ಷ ಕರಿಬಸಪ್ಪ ತಿಳಿಸಿದರು.

ಅಜ್ಜಂಪುರ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್‌ನಿಂದ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.
ಜಾನಪದ ಕಲೆ ಇನ್ನೂ ಜೀವಂತವಾಗಿರುವುದು ಗ್ರಾಮೀಣ ಭಾಗದಲ್ಲಿ. ಆದರೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಕಲೆಗೆ ಮತ್ತಷ್ಟು ಜೀವ ತುಂಬಲು ಸಾಧ್ಯ. ಹಿರಿಯ ಕಲಾವಿದರನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾನಪದ ಪರಿಷತ್ ಜಿಲ್ಲಾ ಸಮ್ಮೇಳನ ಗ್ರಾಮೀಣ ಭಾಗದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಚಿಂತಕ ಚಟ್ನಳ್ಳಿ ಮಹೇಶ್ ಮಾತನಾಡಿ, ಜಾನಪದ ಸಾಹಿತ್ಯ, ಸಂಸ್ಕೃತಿ, ಸಂಗೀತ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತವೆ. ಸ್ವಾಸ್ಥೃ ಸಮಾಜವನ್ನಾಗಿಸಲು ಪ್ರೇರಣೆ ನೀಡುತ್ತವೆ. ಮನೆಯ ಹಿರಿಯರು ಮಕ್ಕಳಿಗೆ ಜಾನಪದ ಸಂಸ್ಕೃತಿ ಪರಿಚಯ ಮಾಡಿಕೊಡಬೇಕಿದೆ ಎಂದರು.
ಚಿಂತಕ ಡಿ.ಪಿ.ರಾಜಣ್ಣ ಮಾತನಾಡಿ, ಹಳೇ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎನ್ನುವಂತೆ ಜನಪದ ಸಂಸ್ಕೃತಿ ಇದ್ದರೆ ಮಾತ್ರ ಭಾರತೀಯ ಸಂಸ್ಕೃತಿ ಜೀವಂತವಿರಲು ಸಾಧ್ಯ ಎಂದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ ಜನಪದ ಕಲೆ, ಸಾಹಿತ್ಯ, ಸಂಗೀತ ಉಳಿಸಲು ಹೋಬಳಿ, ಜಿಲ್ಲೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದೆ ಎಂದರು.
ಬೆಂಗಳೂರು ಯುವಕರ ತಂಡ ಹಾಗೂ ಭಜನಾ ತಂಡಗಳು ಸಮ್ಮೇಳನದಲ್ಲಿ ರಂಜಿಸಿದವು. ಗ್ರಾಮದ ಮಹಿಳೆಯರು ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದರು.
ಮಾಜಿ ಶಾಸಕ ಎಸ್.ಎಂ.ನಾಗರಾಜು, ಜಿಪಂ ಮಾಜಿ ಸದಸ್ಯ ಕುಂಟಿನಮಡು ಆನಂದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಶಂಭೈನೂರು ಆನಂದಪ್ಪ, ಬಸವರಾಜ ನೆಲ್ಲಿಸರ, ತಿಪ್ಪೇಶಪ್ಪ, ಆರ್.ನಾಗೇಶ್, ಬಸಪ್ಪ, ದ.ರಾಜಣ್ಣ, ಲಕ್ಷ್ಮೀದೇವಮ್ಮ, ಬಸವರಾಜು, ಕಾರೆಹಳ್ಳಿ ಬಸಪ್ಪ, ಕಾಂತರಾಜು, ಚಿಕ್ಕನಲ್ಲೂರು ಜಯಣ್ಣ, ನಾರಾಯಣಪುರ ರಾಜಣ್ಣ, ದೇವರಾಜು, ಮಾಳೇನಹಳ್ಳಿ ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net