

ಎಚ್.ಡಿ.ಕೋಟೆ : ತಾಲೂಕಿನ ತಾರಕ ಜಲಾಶಯದ ಹಿನ್ನೀರಿನಲ್ಲಿ ಕಳೆದ ಮೂರು ದಿನದ ಹಿಂದೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಹಿರೇಹಳ್ಳಿ ಎ.ಕಾಲನಿ ಹಾಡಿ ಬಾಲಕ ಮಣಿಕಂಠನ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಪರದಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಪೂರ್ವಜರ ಕಾಲದಿಂದಲೂ ಹಾಡಿಯ ಜನರು ಅರಣ್ಯ ಪ್ರದೇಶದಲ್ಲಿ ಇರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಅದರಂತೆ ಮಣಿಕಂಠನ ಮೃತದೇಹವನ್ನೂ ಅರಣ್ಯದ ಅಂಚಿನಲ್ಲಿರುವ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಅರಣ್ಯ ಇಲಾಖೆ ರೈಲ್ವೆ ಬ್ಯಾರಿ ಕ್ಯಾಡ್ ನಿರ್ಮಿಸಿ, ಅದಕ್ಕೆ ಸೋಲಾರ್ ಅಳವಡಿಸಿರುವುದರಿಂದ ಮೃತದೇಹವನ್ನು ಅರಣ್ಯದೊಳಗೆ ಕೊಂಡೊಯ್ಯಲು ಪರದಾಟ ನಡೆಸಿದ್ದಾರೆ.
ಹಾಡಿ ನಿವಾಸಿಗಳು ಮೃತದೇಹವನ್ನು ಹೊತ್ತು ಕೊಂಡು ಬಂದು ನಂತರ ಕೆಳಗೆ ಇಟ್ಟು, ಕಂದಕಕ್ಕೆ ಇಳಿದು ರೈಲ್ವೆ ಕಂಬಿ ಕೆಳಗೆ ನುಗ್ಗಿದ್ದಾರೆ. ಆ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮೃತದೇಹವನ್ನು ಸಾಗಿಸಿ, ಅಂತ್ಯ ಕ್ರಿಯೆ ನಡೆಸಿದ್ದಾರೆ. ಈ ಮನಕುಲಕುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಮಾತನಾಡಿದ ಹಾಡಿಯ ನಿವಾಸಿ ಚಿಕ್ಕಬಸವ, ನಮ್ಮ ಪೂರ್ವಿಕರ ಕಾಲದಿಂದಲೂ ನಮ್ಮ ಸಮುದಾಯದಲ್ಲಿ ಯಾರೆ ಮೃತಪಟ್ಟರೂ ಅರಣ್ಯ ಪ್ರದೇಶದಲ್ಲೇ ಇರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಬ್ಯಾರಿಕೇಡ್ ಅಳವಡಿಸಿ ಸೋಲಾರ್ ಅಳವಡಿಸಿರುವುದರಿಂದ ಮೃತ ದೇಹವನ್ನು ತೆಗೆದುಕೊಂಡು ಹೋಗಲು ತೊಂದರೆಯಾಗಿದೆ. ಬ್ಯಾರಿಕೇಡ್ ತೆರವುಗೊಳಿಸಿ, ಈ ಸಮಯದಲ್ಲಿ ನಮಗೆ ಓಡಾಡಲು ಸಮಪರ್ಕವಾದ ದಾರಿ ಮಾಡಿಕೊಡಬೇಕೆಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನದಲ್ಲಿ ಡಿಸಿ ಹಾಗೂ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ನಮ್ಮ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಮಾಡಲು ತೊಂದರೆ ಆಗಿದೆ. ರೈಲ್ವೆ ಕಂಬಿ ಜತೆಗೆ ಹತ್ತು, ಹನ್ನೆರಡು ಅಡಿ ಹಾಳದ ಆನೆ ಕಂದಕ ಇದ್ದು, ಮೃತದೇಹವನ್ನು ಹೊತ್ತು ಇಳಿದು ಅರ್ದ ಕಿ.ಮೀ. ದೂರ ಹೋಗಿ ಶವಸಂಸ್ಕಾರ ಮಾಡಬೇಕಾಗಿದೆ ಎಂದು ಬೇಸರಿಸಿದರು.
ಹಾಡಿಯಲ್ಲಿ 160 ಕುಟುಂಬಗಳು ವಾಸ ಮಾಡುತ್ತಿದ್ದು, ಪ್ರತಿ ಬಾರಿ ಶವಸಂಸ್ಕಾರ ಮಾಡಲು ತೊಂದರೆ ಇದೆ. ಈ ಸಮಸ್ಯೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಅವರು ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ದೂರಿದರು.
ಈ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ತಾಲೂಕು ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಲು ಪ್ರಯತ್ನ ಮಾಡಲಾಯಿತು ಆದರೆ ಅವರಿಗೆ ಕರೆ ಸ್ವೀಕರಿಸಲಿಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.