

ಸರಗೂರು: ನಡಹಾಡಿ ಮತ್ತು ಕಳ್ಳಕಟ್ಟಿ ಹಾಡಿಯಲ್ಲಿ ಕುಡಿಯುವ ನೀರಿಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬಿಂದಿಗೆ ಹಿಡಿದು ಹಾಡಿ ಜನರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಬಿ.ಮಟಕರೆ ಗ್ರಾಪಂ ವ್ಯಾಪ್ತಿಯ ನಾಡಹಾಡಿ ಹಾಗೂ ಕಳ್ಳಕಟ್ಟಿ ಹಾಡಿ ಸುಮಾರು 6 ತಿಂಗಳಿಂದ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂದು ಬುಧವಾರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ದಸಂಸ (ಅಂಬೇಡ್ಕರ್ ವಾದ) ಸಹಕಾರದೊಂದಿಗೆ ಹಾಡಿ ನಿವಾಸಿಗಳು ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ಮಾತನಾಡಿ, 30 ಕುಟುಂಬದವರು ಹಲವು ಬಾರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಇಲ್ಲಿನ ಜನತೆ ಕುಡಿಯುವ ನೀರಿಲ್ಲದೆ ತತ್ತರಿಸಿದೆ. ಆದರೆ ಗ್ರಾ.ಪಂ. ಮೌನ ವಹಿಸಿದೆ. ಹಾಡಿಯ ಜನರಿಗೆ ಜನಜೀವನ ಮಿಷನ್ ಯೋಜನೆಯಡಿ ನಿರ್ಮಿಸಿರುವ ನಲ್ಲಿಗಳಿಗೆ ನೀರು ಪೈಪ್ ಇದ್ದರೂ ನೀರು ಬಿಡಿ ಎಂದು ನೀರಗಂಟಿ ಕೆಂಪರಾಜು ಎಂಬುವರಿಗೆ ಹೇಳಿದರೆ ಹಾಡಿಯ ಜನರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಹಲವು ಬಾರಿ ವಾಟರ್‌ಮನ್‌ಗೆ ಹಾಡಿಯ ಜನರು ಮನವಿ ಮಾಡಿದ್ದಾರೆ. ಅದನ್ನು ಮೇಲಿನ ಅಧಿಕಾರಿಗಳಿಗೆ ಗಮನಕ್ಕೆ ತರದೆ ಉಡಾಫೆ ತೊರಿಸಿದ್ದಾರೆ ಎಂದು ಆರೋಪಿಸಿದರು.
ನಡಹಾಡಿ ಮತ್ತು ಕಳ್ಳಕಟ್ಟಿ ಹಾಡಿಗೆ ಕುಡಿಯುವ ನೀರು ಸರಬರಾಜು ಮಾಡಲಿಲ್ಲವೆಂದರೆ ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಾಡಿ ಮಹಿಳೆ ಜಯಮ್ಮ ಮಾತನಾಡಿ, ಹಾಡಿ ಜನರೆಂದು ನಮ್ಮನ್ನು ನಿರ್ಲಕ್ಷೃ ಮಾಡಲಾಗುತ್ತಿದೆ. ಸಾಮಾನ್ಯ ಜನರಿಗೆ ಸರಿಯಾದ ಸಮಯಕ್ಕೆ ನೀರು ಬಿಡುತ್ತಾರೆ. ಆದರೆ ನಮಗೆ ನೀರು ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಹಾಡಿ ನಿವಾಸಿಗಳಾದ ಮಂಗಳಾ, ಸಪ್ನಾ, ಪಲ್ಲವಿ, ಲಕ್ಷ್ಮೀ ,ಪಲ್ಲವಿ, ಗೌರಿ, ರಶ್ಮಿ, ನಾಗೇಶ್, ಕಾವ್ಯಾ, ರಮ್ಯಾ, ರತ್ನ, ಸೌಮ್ಯ, ರಾಣಿ, ದಸಂಸ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಮಹದೇವಸ್ವಾಮಿ ಕೂಲ್ಯ, ಕುರ್ಣೇಗಾಲ ಕೃಷ್ಣ, ನಾಗೇಂದ್ರ, ಮಣಿಕಂಠ, ಶಿವರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.