ಜನರ ಸಮಸ್ಯೆ ಅರಿಯಲು ‘ವಿಜಯ ಸ್ಪಂದನ’ ಆ್ಯಪ್

20 HPT 2
Published on

ಹೊಸಪೇಟೆ: ತಕ್ಷಣ ಪರಿಹರಿಸಬಹುದಾದ ಜನಸಾಮಾನ್ಯರ ಸಮಸ್ಯೆಗಳನ್ನು ತಿಳಿಯಲು ‘ವಿಜಯ ಸ್ಪಂದನ’ ಮೊಬೈಲ್ ಆ್ಯಪ್ ಜಾರಿಗೆ ತರಲಾಗುವುದು. ನೂತನ ಜಿಲ್ಲೆಯ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ಖಾಲಿ ಹುದ್ದೆಗಳ ಭರ್ತಿಗೆ ಪ್ರಯತ್ನಿಸಲಾಗುವುದು. ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯ ಹೆಚ್ಚಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೂತನ ವಿಜಯನಗರ ಜಿಲ್ಲೆಯಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕಿದೆ. ಅದಕ್ಕಾಗಿ ಮೇಲಿಂದ ಮೇಲೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ:https://www.vijayavani.net/forest-act-amendment-opposition
ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳು ಖಾಸಗಿ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ. ಅದರೊಂದಿಗೆ ಅಂಗನವಾಡಿಗಳನ್ನು ಸುಸಜ್ಜಿತಗೊಳಿಸಲು ಪ್ರಯತ್ನಿಸಲಾಗುವುದು. ಅದಕ್ಕಾಗಿ ಸ್ವಂತ ಕಟ್ಟಡ ಇಲ್ಲದ ಕೇಂದ್ರಗಳು, ಕೊಠಡಿಗಳ ಸಮಸ್ಯೆ ಎದುರಿಸುತ್ತಿರುವ ಶಾಲೆಗಳ ಬಗ್ಗೆ ಆಯಾ ಇಲಾಖೆಗಳಿಂದ ಮಾಹಿತಿ ಪಡೆಯಲಾಗಿದೆ.

ಮುಂದಿನ ದಿನಗಳಲ್ಲಿ ಸಿಆರ್‌ಸಿಗಳ ಸಭೆ ನಡೆಸಿ, ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಮಾಹಿತಿ ಪಡೆಯಲಾಗುವುದು. ಪರಿಹಾರಕ್ಕಾಗಿ ಕೆಎಂಆರ್‌ಸಿ ನಿಧಿ, ಡಿಎಂಎಫ್ ಹಾಗೂ ಕೆಕೆಆರ್‌ಡಿಬಿ ಅನುದಾನ ಬಳಕೆ ಮಾಡಿಕೊಳ್ಳಲಾಗುವುದು.

ಜಿಲ್ಲಾಡಳಿತ ದೊಂದಿಗೆ ಅತ್ಯುತ್ತಮವಾಗ ಕೈಜೋಡಿಸಿ ಅತ್ಯುತ್ತಮವಾಗಿ ಸೇವೆ ನೀಡುವ ಸರ್ಕಾರಿ ಶಾಲೆ ಶಿಕ್ಷಕರು, ಹಾಸ್ಟೆಲ್ ವಾರ್ಡ್‌ನ್ ಅಥವಾ ಕುಕ್, ಅಂಗನವಾಡಿ ಮೇಲ್ವಿಚಾರಕರು, ಸಹಾಯಕರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯವನಾದ ನಾನು ಈ ಭಾಗದ ಜನರ ಜೀವನ, ಬಡತನ, ಸಾಮಾಜಿಕ ಸಮಸ್ಯೆಗಳ ಅರಿವಿದೆ.

ಬಡತನವನ್ನು ಅನುಭವಿಸದಿದ್ದರೂ, ತುತ್ತು ಅನ್ನಕ್ಕಾಗಿ ಪರದಾಡುವ ಜನರನ್ನು ಹತ್ತಿರದಿಂದ ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ನ್ನು ಸುಸಜ್ಜಿತಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿರಲಿದೆ. ಜಿಲ್ಲೆಯನ್ನು ಆಮೂಲಾಗ್ರ ಬದಲಾವಣೆ ಮಾಡುವ ಭ್ರಮೆಯಲ್ಲಿ ನಾನಿಲ್ಲ. ಜನರ ಬೇಕು- ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಗುರಿಯಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net