ಮನೆಗಳು ಬೀಳುವ ಆಂತಕದಲ್ಲಿ ಜನರು

IMG_20240801_164005
Published on


ಆಲೂರು : ತಾಲೂಕಿನಲ್ಲಿ ಕಳೆದೊಂದು ತಿಂಗಳಿಂದ ಸುರಿಯುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಮಹಾ ಮಳೆಗೆ ನೆಂದು ಹಲವು ಮನೆಗಳು ಬೀಳುವ ಆತಂಕ ಜನರಲ್ಲಿ ಎದುರಾಗಿದೆ. ಈಗಾಗಲೇ ರೈತರು ಬೆಳೆದ ಜೋಳ, ಶುಂಠಿ, ಆಲೂಗೆಡ್ಡೆ ಬೆಳೆಗಳು ನೆಲಕಚ್ಚಿವೆ. ಕೆರೆಕೋಡಿಗಳು ಹೊಡೆದು ಜಮೀನುಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ವಾಸ ಮಾಡಲು ಜನರು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಆಲೂರು ತಾಲೂಕಿನಲ್ಲಿ ಈಗಾಗಲೇ ಸುಮಾರು 130 ಹೆಚ್ಚು ಮನೆಗಳು ಹಾನಿಯಾಗಿವೆ. ಕಾರ್ಜುವಲ್ಲಿ ಮಠಕ್ಕೆ ತೇರಳುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಎತ್ತಿನಹೊಳೆ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಹಾಗೂ ರೈತರು ಬೆಳೆದ ಬೆಳೆ ಹಾಳಾಗಿದೆ. ಕಡ್ಲೂರು ಕೂಡಿಗೆಯಿಂದ ಮಗ್ಗೆ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ತಾಲೂಕಿನಲ್ಲಿ ಹೀಗೆ ಹತ್ತಾರು ಸಮಸ್ಯಯಿಂದ ಜನಸಾಮಾನ್ಯರು ಹೈರಾಣಗಿದ್ದಾರೆ.


ಪಾಳ್ಯ ಹೋಬಳಿಯ ತಾಳೂರು ಗ್ರಾಮದ ತಿಮ್ಮಯ್ಯ, ಚಂದ್ರಯ್ಯ ಅವರ ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹೇಮರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಸಬಾ ಹೋಬಳಿಯಲ್ಲಿ 10 ಮಿ.ಮೀ, ಪಾಳ್ಯ 15.8 ಮಿ.ಮೀ, ಕುಂದೂರು 13.6 ಮಿ.ಮೀ. ಕೆ.ಹೊಸಕೋಟೆ ಹೋಬಳಿಗಳಲ್ಲಿ 15.0 ಮಿ.ಮಿ ಮಳೆಯಾಗಿದೆ. ತಾಲೂಕಿನ ಅನಿಗಳಲೆ ಗ್ರಾಮದ ಬಸವಯ್ಯ, ತಿಪ್ಪನಹಳ್ಳಿಯ ಜವರೇಗೌಡ, ಗಂಗರ ಗೋಪಾಲೇಗೌಡ ಮನೆಗಳು ಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net