ಕಣ್ಣೀರಿಗೆ ಯಶವಂತಪುರ ಜನತೆ ಮರುಳಾಗಲ್ಲ: ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಹೇಳಿಕೆ

ST Somashekhar
Published on

ಬೆಂಗಳೂರು: ಯಶವಂತಪುರದ ಜನತೆ ತುಂಬಾ ಬುದ್ಧಿವಂತರಿದ್ದು, ಕಣ್ಣೀರು ಹಾಕಿದಾಕ್ಷಣ ಮರುಳಾಗುವುದಿಲ್ಲ. ವಿರೋಧ ಪಕ್ಷದವರು ತಂತ್ರಗಾರಿಕೆ ಫಲ ಕೊಡುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.

ಕ್ಷೇತ್ರದಲ್ಲಿ ಮೂಲ ಸೌಕರ್ಯ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ದೊಡ್ಡಬಿದರಕಲ್ಲು, ಹೇರೋಹಳ್ಳಿ ವಾರ್ಡ್​ಗಳಲ್ಲಿ ಕಳೆದೊಂದು ದಶಕದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇನೆ ಎಂದು ಹೇಳಿದರು. ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಶಾಸಕನಾಗಿ ಆಯ್ಕೆ ಮಾಡಿದ ಜನತೆಯ ಆಶೋತ್ತರಗಳಿಗೆ ಬದ್ಧನಾಗಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಇದರಲ್ಲಿ ಸಂದೇಹ ಬೇಡ ಎಂದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿ, ಕೆಂಗೇರಿ ವಾರ್ಡ್​ನಲ್ಲಿ ಸೋಮಶೇಖರ್ ಭರ್ಜರಿ ಪ್ರಚಾರ ನಡೆಸಿದರು. ಮನೆಮನೆ ಭೇಟಿ ಸಂದರ್ಭದಲ್ಲಿ ಮಹಿಳೆಯರು, ವಯೋವೃದ್ಧರು ಅವರಿಗೆ ಬೆಂಬಲ ಸೂಚಿಸಿದರು. ಯಶವಂತಪುರ ಕ್ಷೇತ್ರದ ಉಸ್ತುವಾರಿ ಯಾಗಿ ನೇಮಕಗೊಂಡಿರುವ ಜಾರ್ಖಂಡ್​ನ ಬಿಜೆಪಿ ಶಾಸಕರಾದ ಮನೀಶ್ ಜೈಸ್ವಾಲ್ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಪಕ್ಷ ಸೇರ್ಪಡೆ: ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಅನ್ಯ ಪಕ್ಷದ ನೂರಾರು ಕಾರ್ಯಕರ್ತರು ಸೋಮಶೇಖರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net