ಸೋಲು ಗೆಲುವನ್ನು ಮಂಡ್ಯ ಜನತೆ ತೀರ್ಮಾನಿಸುತ್ತಾರೆ : ಎಚ್.ಡಿ. ಕುಮಾರಸ್ವಾಮಿ

HDK
ಎಚ್.ಡಿ.ಕುಮಾರಸ್ವಾಮಿ
Published on

ಮೈಸೂರು: ಮಂಡ್ಯದಲ್ಲಿ ನನ್ನ ಗೆಲುವು ಅಥವಾ ಸೋಲಿನ ಕುರಿತು ಮಂಡ್ಯದ ಜನರು ತೀರ್ಮಾನ ಮಾಡ್ತಾರೆ. ಕಾಂಗ್ರೆಸ್‌ನವರು ಒಳಗೋ ಹೊರಗೋ ಏನು ಬೇಕಾದರೂ ತಂತ್ರಗಾರಿಕೆ ರೂಪಿಸಲಿ. ಆದರೆ, ಮಂಡ್ಯದ ಜನರ ಒತ್ತಾಯದ ಮೇರೆಗೆ ನಾನು ಸ್ಪರ್ಧಿಸಿದ್ದೇನೆ, ಗೆಲುವು, ಸೋಲನ್ನು ಅವರೇ ನಿರ್ಧರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನನಗೆ ಮಂಡ್ಯದಲ್ಲಿ ಮಗ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಆ ಸೋಲಿನಲ್ಲಿ ಕಾಂಗ್ರೆಸ್‌ನವರ ಪಾಲು ಸಹ ಇರಲಿಲ್ಲವೇ? ಆ ಸಂದರ್ಭ ನಾವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ತವರು ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಸಿದ್ದರಾಮಯ್ಯ ಅವರ ಟೀಕೆಗೆ ಜನರೇ ಉತ್ತರ ಕೊಡುತ್ತಾರೆ ಎಂದರು.

ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಅವರು ತಡೆಯಲಿ ಎಂದು ತಿರುಗೇಟು ನೀಡಿದರು.

ಡಾ.ಸಿ.ಎನ್. ಮಂಜುನಾಥ್ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೋ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೋ ಎಂಬುದು ಮುಖ್ಯ ಅಲ್ಲ, ಬಿಜೆಪಿ- ಜೆಡಿಎಸ್ ಒಂದಾದ ಮೇಲೆ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಒಂದೇ ಅಲ್ಲವೇ? ಈಗಾಗಲೇ ಸೋಲುವ ಭಯದಿಂದ ಕಾಂಗ್ರೆಸ್ ಕುಕ್ಕರ್, ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net