ಹಾಕಿಯ ವೈಭವಕ್ಕೆ ಸರ್ವ ಜನಾಂಗದವರೂ ಕೈಜೋಡಿಸಬೇಕು: ಎಂ.ಸಿ.ನಾಣಯ್ಯ

book reliz
Published on

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಹಬ್ಬವು ಕ್ರೀಡೆಯ ಜತೆಗೇ ತನ್ನ ವೈವಿಧ್ಯತೆಯ ಕಾರ್ಯಕ್ರಮಗಳ ಮೂಲಕ ಜಗತ್ತಿನ ಗಮನವನ್ನೇ ಸೆಳೆದಿದ್ದು, ಇಂಥ ಕ್ರೀಡಾ ಹಬ್ಬವನ್ನು ಮುಂದಿನ ವರ್ಷ್ಬಗಳಲ್ಲಿ ಮತ್ತಷ್ಟು ವೈಭವದಿಂದ ಆಯೋಜಿಸುವ ನಿಟ್ಟಿನಲ್ಲಿ ಸರ್ವ ಸಮುದಾಯವರೂ ಕೈಜೋಡಿಸಬೇಕೆಂದು ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಕರೆ ನೀಡಿದರು.

ಮಡಿಕೇರಿಯ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಬರೆದು ಪತ್ರಕರ್ತ ಎಚ್.ಟಿ.ಅನಿಲ್ ಹೊರತಂದಿರುವ ಸ್ಟಿಕ್ ವರ್ಕ್ ಮ್ಯಾಜಿಕ್-ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಎಂಬ ಕೊಡವ ಹಾಕಿ ಪಂದ್ಯಾಟದ ೨೫ ವರ್ಷಗಳ ಇತಿಹಾಸದ ಮಾಹಿತಿಯುಳ್ಳ ಇಂಗ್ಲೀಷ್ ಪುಸ್ತಕವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

೫ ಸಾವಿರ ಹಾಕಿ ಆಟಗಾರರು ಪಂದ್ಯಾಟದಲ್ಲಿ ಪಾಲ್ಗೊಳ್ಳುವುದೇ ಚರಿತ್ರಾರ್ಹ ವಿಚಾರ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಗಿನ್ನೀಸ್ ರೆಕಾರ್ಡ್‌ಗೂ ಕೂಡ ಸೇರಿರುವ ಹಾಕಿ ಪಂದ್ಯಾವಳಿ ಮುಂದಿನ ದಿನಗಳಲ್ಲಿ ವಿಶ್ವದಾಖಲೆಯನ್ನು ನಿರಂತರ ಉಳಿಸಿಕೊಳ್ಳುವಂತಾಗಲಿ. ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಮೂಡಿದ ಕೊಡವ ಕೌಟುಂಬಿಕ ಹಾಕಿ ಯಾವುದೇ ಸಮಸ್ಯೆಗಳಿಲ್ಲದೇ ೨೫ ವರ್ಷಗಳನ್ನು ಪೂರೈಸಿದೆ. ೨೫ ಕುಟುಂಬಗಳ ಆಯೋಜಕ ಸಮಿತಿ ಈ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. ಅಂಥ ಎಲ್ಲಾ ಕುಟುಂಬಗಳನ್ನೂ ೨೫ನೇ ವರ್ಷಾಚರಣೆ ಸಂದರ್ಭ ಸ್ಮರಿಸಿಕೊಳ್ಳುವುದು ಅಗತ್ಯ ಎಂದೂ ನಾಣಯ್ಯ ಹೇಳಿದರು.

ಕೊಡವ ಹಾಕಿ ಅಕಾಡೆಮಿಯ ಅಧ್ಕ್ಷಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ತನ್ನ ತಂದೆ ಪಾಂಡಂಡ ಕುಟ್ಟಪ್ಪನವರು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾವಳಿ ಪ್ರಾರಂಭ ಮಾಡಿದಾಗ ಅನೇಕರು ವೃತ್ತಿಪರರಲ್ಲದವರನ್ನು ಬಳಸಿಕೊಂಡು ಎಂಥ ಹಾಕಿ ಎಂದು ವ್ಯಂಗ್ಯ, ಹಾಸ್ಯ ಮಾಡಿದ್ದರು. ಆದರೂ ಛಲಬಿಡದೆ ತನ್ನ ತಂದೆ ಕುಟ್ಟಪ್ಪನವರು ಹಾಕಿ ಪಂದ್ಯಾವಳಿಯನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸಿದ್ದರು. ತಂದೆ ಹಾಕಿ ಕೊಟ್ಟ ಮಾರ್ಗದರ್ಶನದಂತೆ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷನಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಮುನ್ನಡೆಸುತ್ತಿದ್ದೇನೆ. ಪ್ರತೀ ವರ್ಷವೂ ೨೦-೩೦ ಹೊಸ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದೇ ರೀತಿ ಮುಂದುವರೆದರೆ ಮುಂದಿನ ೫ ವರ್ಷಗಳಲ್ಲಿ ೫೦೦ ತಂಡಗಳು ಬರುವ ಸಾಧ್ಯತೆಯಿದೆ. ಈಗಾಗಲೇ ೨೦೩೩ ರವರೆಗೆ ಅಂದರೆ ಮುಂದಿನ ೮ ವರ್ಷಗಳವರೆಗೂ ಆಯೋಜಿಕ ಕುಟುಂಬಸ್ಥರು ಕೊಡವ ಹಾಕಿ ಪಂದ್ಯಾವಳಿ ಆಯೋಜನೆಗೆ ಸಿದ್ದರಾಗಿದ್ದಾರೆ. ಅಂತರರಾಷ್ಟ್ರೀಯ ಸಿಂಥೆಟಿಕ್ ಟರ್ಫ್, ಮೈದಾನ ಬೇಕು. ಹಾಕಿಗೆ ಆದ್ಯತೆ ನೀಡುವಂಥ ಕ್ರೀಡಾ ಅಕಾಡೆಮಿಯೂ ಕೊಡಗಿಗೆ ಬೇಕು. ಇದರ ಜಾರಿಗೆ ತಾನು ಪ್ರಯತ್ನಿಸುತ್ತಿದ್ದೇನೆ ಎಂದೂ ಪಾಂಡಂಡ ಬೋಪಣ್ಣ ಹೇಳಿದರು.

ಸ್ಟಿಕ್ ವರ್ಕ್ ಮ್ಯಾಜಿಕ್ ಕೃತಿಯ ಲೇಖಕ, ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಮಾತನಾಡಿ, ಅನೇಕ ಕುಟುಂಬಗಳಲ್ಲಿ ಸಮರ್ಪಕ ಮಾಹಿತಿಯ ದಾಖಲೆಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇಂಥ ಕೊರತೆಯಾಗಂತೆ ಕೊಡವ ಹಾಕಿ ಅಕಾಡೆಮಿಯೇ ಪರಿಪೂರ್ಣ ರೀತಿಯಲ್ಲಿ ಪ್ರತೀ ವರ್ಷದ ಹಾಕಿ ಪಂದ್ಯಾವಳಿಯ ದಾಖಲೆಯನ್ನು ಸಂಗ್ರಹಿಸಿಟ್ಟುಕೊಳ್ಳುವಂತಾಗಬೇಕು ಎಂದರು.

ಮುದ್ದಂಡ ಹಾಕಿ ಪಂದ್ಯಾವಳಿ ಆಯೋಜಕ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, ಹೊಸ ಪ್ರಯತ್ನವಾಗಿ ಈ ಕೊಡವ ಹಾಕಿ ಪಂದ್ಯಾವಳಿ ಸಾಗಿ ಬಂದ ಹಾದಿಯ ಬಗ್ಗೆ ಸಾಕ್ಷ್ಯ ಚಿತ್ರವನ್ನೂ ನಿರ್ಮಿಸುತ್ತಿದ್ದೇವೆ. ಸೋಷಿಯಲ್ ಮೀಡಿಯಾ ಮೂಲಕ ಯುವಪೀಳಿಗೆಯನ್ನು ಮುದ್ದಂಡ ಹಾಕಿ ಪಂದ್ಯಾವಳಿ ನಿರೀಕ್ಷಗೂ ಮೀರಿ ತಲುಪಿದೆ. ಇದೇ ರೀತಿಯ ವಿನೂತನ ಪ್ರಯತ್ನಗಳು ಪ್ರತೀ ವರ್ಷವೂ ಮುಂದುವರೆದರೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿಯೂ ಪ್ರಜ್ವಲಿಸಲು ಸಾಧ್ಯವಿದೆ ಎಂದೂ ರಶಿನ್ ಸುಬ್ಬಯ್ಯ ಹೇಳಿದರು.

ಇದೇ ಸಂದರ್ಭ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದ ಮೊದಲ ಪಂದ್ಯಾವಳಿಯಲ್ಲಿ ೧೯೯೭ರಲ್ಲಿ ಮೊದಲ ಗೋಲು, ಮೊದಲ ಹ್ಯಾಟ್ರಿಕ್ ಗಳಿಕೆಯ ಸಾಧನೆ ಮಾಡಿದ್ದ ಅಪ್ಪನೆರವಂಡ ಚುಮ್ಮಿ ದೇವಯ್ಯ ಮತ್ತು ಕೊಡವ ಹಾಕಿ ಪಂದ್ಯಾವಳಿಯ ೨೫ ನೇ ವರ್ಷದ ಸಂದರ್ಭ ಮಡಿಕೇರಿಯಲ್ಲಿ ಬೃಹತ್ ಕಲೆಯ ಮೂಲಕ ಹಾಕಿಯ ಬೆಳ್ಳಿ ಹಬ್ಬದ ಸಂಭ್ರಮವನ್ನು ಪ್ರದರ್ಶಿಸಿದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಸ್ಟಿಕ್ ವರ್ಕ್ ಮ್ಯಾಜಿಕ್ ಕೃತಿಯ ಪ್ರಕಾಶಕ ಪತ್ರಕರ್ತ ಎಚ್.ಟಿ.ಅನಿಲ್, ಹೆಸರಾಂತ ಹಾಕಿ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್, ಕೊಡವ ಜನಾಂಗದ ಮೊದಲ ಅಂತರರಾಷ್ಟ್ರೀಯ ಹಾಕಿ ಆಟಗಾರ ಮಾಳೆಯಂಡ ಡಿ.ಮುತ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net