

ಬೆಂಗಳೂರು: ರಾಜಧಾನಿಯಲ್ಲಿ ಶೇ. 31 ಜನರು ಸಮೂಹ ಸಾರಿಗೆಗಿಂತ ಸ್ವಂತ ವಾಹನ ಬಳಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂಬ ವಿಚಾರ ಬಿ ಪ್ಯಾಕ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಸಮೂಹ ಸಾರಿಗೆ ಬಳಸುವಂತೆ ಜನರಲ್ಲಿ ಬಿಎಂಟಿಸಿ, ಬಿಎಂಆರ್ಸಿಎಲ್ ಮನವಿ ಮಾಡಿಕೊಳ್ಳುತ್ತಿವೆ. ಆದರೂ, ಬಹುತೇಕ ಮಂದಿ ಸ್ವಂತ ವಾಹನಗಳಲ್ಲೇ ಸಂಚರಿಸುತ್ತಿದ್ದಾರೆ. ಸಮೂಹ ಸಾರಿಗೆ ಬಳಕೆ ಕುರಿತ ಸಮಸ್ಯೆಗಳೇ ಇದಕ್ಕೆ ಕಾರಣ ಎಂಬುದು ಬಿ-ಪ್ಯಾಕ್ ಸಂಸ್ಥೆ ನಡೆಸಿರುವ ಸರ್ವೆಯಲ್ಲಿ ಅನಾವರಣಗೊಂಡಿದೆ.
ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲು ನಿಲ್ದಾಣಗಳನ್ನು ತಲುಪಲು ಪರ್ಯಾಯ ವ್ಯವಸ್ಥೆ ಇಲ್ಲದಿರುವುದು, ಸಮರ್ಪಕ ನಿಲ್ದಾಣಗಳ ಕೊರತೆ, ನಿಗದಿತ ಸಮಯಕ್ಕೆ ಬಸ್ಗಳು ಬಾರದಿರುವುದು ಸೇರಿ ಹಲವು ಕಾರಣಗಳಿಂದ ಸ್ವಂತ ವಾಹನಗಳ ಬಳಕೆಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಜನರು ತಿಳಿಸಿದ್ದಾರೆ.
ಆನ್ಲೈನ್ ಸರ್ವೆ: ಬಿ-ಪ್ಯಾಕ್ ಸಂಸ್ಥೆ ಆನ್ಲೈನ್ ಮೂಲಕ ನಡೆಸಲಾದ ಸಮೀಕ್ಷೆಯಲ್ಲಿ 1,129 ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಶೇ. 69 ಸಮೂಹ ಸಾರಿಗೆ ಬಳಸುತ್ತಿರುವ ಕುರಿತು ತಿಳಿಸಿದ್ದಾರೆ. ಅವರಲ್ಲಿ ಶೇ. 53 ಜನರು ಬಸ್, ಮೆಟ್ರೋ ನಿಲ್ದಾಣಕ್ಕೆ ನಡೆದುಕೊಂಡು ಬರುತ್ತಿದ್ದಾರೆ.
ಶೇರಿಂಗ್ನಲ್ಲಿ ಮಹಿಳೆಯರ ಮೇಲುಗೈ: ವಾಹನಗಳನ್ನು ಹಂಚಿಕೊಂಡು (ಶೇರಿಂಗ್) ಪ್ರಯಾಣ ಮಾಡುವ ವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನವರಾಗಿದ್ದಾರೆ. ಬಸ್, ಮೆಟ್ರೋ ನಿಲ್ದಾಣಗಳಿಗೆ ಕಾರು ಅಥವಾ ಆಟೋಗಳ ಮೂಲಕ ಶೇ. 65 ಮಹಿಳೆಯರು ಶೇರಿಂಗ್ ವಾಹನ ಬಳಸುವುದಾಗಿ ತಿಳಿಸಿದ್ದಾರೆ.