

ಬೆಟ್ಟದಪುರ: ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಮೂಲಕ ಜನ ಸಮೂಹಕ್ಕೆ ಧೈರ್ಯ ತುಂಬಬೇಕಿದೆ. ಕ್ಯಾನ್ಸರ್ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಆದರೆ, ತಂಬಾಕು, ಇನ್ನಿತರ ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಯುತ ಜೀವನ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಕೆ ಶ್ರೀನಿವಾಸ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಭುವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೊಣಸೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಕ್ಯಾನ್ಸರ್ ದಿನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್‌ಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ರೋಗವನ್ನು ತಪ್ಪಿಸಲು ಅವರಿಗೆ ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಲತಾ ಮಾತನಾಡಿ, ಜನಸಾಮಾನ್ಯರು ರೋಗ ನಿಯಂತ್ರಿಸುವ ಅಭ್ಯಾಸಗಳನ್ನು ಕಲಿಯಬೇಕು. ಆಧುನಿಕ ಜೀವನ ಹಾಗೂ ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ನಡೆಯುವಂತಹ ಕಾರ್ಯಕ್ರಮಗಳಲ್ಲಿ, ಶಿಬಿರಗಳಲ್ಲಿ ಭಾಗವಹಿಸಿ ಅಲ್ಲಿ ದೊರೆಯುವ ಮಾಹಿತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆಗಾಗ್ಗೆ ಆರೋಗ್ಯ ಪರೀಕ್ಷೆ ಮಾಡಿಸುವ ಮೂಲಕ ಹೆಚ್ಚಿನ ನಿಗಾ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ದಂತ ವೈದ್ಯೆ ಡಾ.ದಿವ್ಯಾಶ್ರೀ ಮಾತನಾಡಿ, ಬಾಯಿ ಕ್ಯಾನ್ಸರ್ ಕೂಡ ಕ್ಯಾನ್ಸರ್‌ನ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. ಇದರ ಲಕ್ಷಣಗಳು ಕಂಡು ಬಂದ ತಕ್ಷಣ ನಿರ್ಲಕ್ಷೃ ಮಾಡದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರು ನೀಡುವ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲಿಸಬೇಕು ಎಂದರು.
ಆರೋಗ್ಯ ತಪಾಸಣೆ: ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿ, ಸುಮಾರು 128 ಮಂದಿಗೆ ಕ್ಯಾನ್ಸರ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಯಿತು. ಆರೋಗ್ಯ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ. ಲತಾ, ವೈದ್ಯಾಧಿಕಾರಿ ಡಾ.ಎಲ್.ಎಂ ಪೂಜಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಕುಮಾರಿ, ಆಪ್ತಸಮಾಲೋಚಕ ಎಂ.ಕೆ. ಪ್ರಕಾಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೆ.ಆರ್.ಶಶಿ, ಸಿಬ್ಬಂದಿ ಹೇಮಾ, ರೇಖಾ, ರೂಪಾ, ವೀರೇಶ್, ಅನುಷಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.