ನದಿ ಪಾತ್ರದ ಜನರಿಗೆ ಆತಂಕ ಬೇಡ

23Athanigramin4A
Published on

ಅಥಣಿ ಗ್ರಾಮೀಣ: ಕೃಷ್ಣಾನದಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಅಥಣಿ ತಾಲೂಕಿನ ಹಲ್ಯಾಳ&ದರೂರ ಗ್ರಾಮಗಳ ಮದ್ಯದಲ್ಲಿರುವ ಸೇತುವೆಗೆ ಶನಿವಾರ ಶಾಸಕ ಲಕ್ಷ್ಮಣ ಸವದಿ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಸುರಿಯುವ ಧಾರಾಕಾರ ಮಳೆಗೆ ಕೊಯ್ನಾ ಜಲಾಶಯ ಸೇರಿ ಧೂದಗಂಗಾ, ಪಂಚಗಂಗಾ, ವೇದಗಂಗಾ ಮತ್ತು ವಾರಾಣಾಸಿ ನದಿಗಳ ಮೂಲಕ ಪ್ರತಿವರ್ಷ ತಾಲೂಕಿನ ಕೃಷ್ಣಾ ನದಿ ಒಳ ಹರಿವು ಹೆಚ್ಚಳವಾಗುತ್ತಿರುವುದರಿಂದ ನಮಗೆ ಈ ಸ್ಥಿತಿ ತಪ್ಪಿದ್ದಲ್ಲ. ಆದರೂ, ನದಿ ದಡದ ಜನರು ಆತಂಕ ಪಡುವ ಅವಶ್ಯವಿಲ್ಲ. 3 ಲ ಕ್ಯೂಸೆಕ್​ಗೂ ಹೆಚ್ಚು ನೀರು ಬಂದಾಗ ಮಾತ್ರ ನದಿ ದಡದ ಗ್ರಾಮಗಳಿಗೆ ಸಮಸ್ಯೆಗಳಾಗುತ್ತವೆ. ಸದ್ಯ 2.65ಲ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಆದರೆ, ಈಗ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೊಯ್ನಾ ಜಲಾಶಯದಿಂದ ನೀರು ಬಿಡುವುದನ್ನು ಕಡಿಮೆ ಮಾಡಿದ್ದರಿಂದ ಸಾಂಗಲಿಯಲ್ಲಿ 4 ರಿಂದ 5 ಅಡಿ ನೀರಿನಮಟ್ಟ ಇಳಿಮುಖವಾಗಿದೆ. ಮುಂದಿನ ಎರಡು ದಿನದಲ್ಲಿ ಇಲ್ಲಿಯೂ ಕಡಿಮೆಯಾಗಲಿದೆ ಎಂದು ಅಲ್ಲಿಯ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ ಎಂದರು.

ಒಂದು ವೇಳೆ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಪೂರ್ವ ಸಿದ್ದತೆ ಮಾಡಲಾಗಿದೆ. ನದಿಯ ದಡದಲ್ಲಿರುವ ಜನರನ್ನು ಸುರತ ಸ್ಥಳಗಳಿಗೆ ಸ್ಥಳಾಂತರಿಸಿ ವಸತಿ, ಊಟ, ಜಾನುವಾರುಗಳಿಗೆ ಮೇವು ಸೇರಿ ಎಲ್ಲ ಮೂಲ ಸೌಕರ್ಯ ಒದಗಿಸಲಾಗುವುದು. ಇಲ್ಲಿಯ ಎಲ್ಲ ಅಧಿಕಾರಿಗಳು ಪ್ರತಿವರ್ಷ ಪ್ರವಾಹ ಸಂದರ್ಭದಲ್ಲಿ ಕೆಲಸ ಮಾಡಿದವರಿದ್ದಾರೆ. ಕಾರಣ ಅವರಿಗೆ ಕೆಲಸ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಸೀಲ್ದಾರ್​ ಸಿದ್ದರಾಯ ಭೋಸಗಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಎಚ್​ಬಿಸಿ ಇಲಾಖೆ ಅಧಿಕಾರಿ ಪ್ರವಿಣ ಹುಣಸಿಕಟ್ಟಿ, ಜಿಪಂ ಎಇಇ ವೀರಣ್ಣ ವಾಲಿ, ತಾಪಂ ಇಒ ಶಿವಾನಂದ ಕೊಲ್ಲಾಪುರ, ತಾಲೂಕು ಆರೋಗ್ಯಾಧಿಕಾರಿ ಬಸನಗೌಡ ಕಾಗೆ, ಅಶೋಕ ಗುಡಿಮನಿ, ಪ್ರವಿಣ ಪಾಟೀಲ, ಪಿಎಸ್​ಐ ಗಿರಿಮಲ್ಲಪ್ಪ ಉಪ್ಪಾರ, ಶಿವು ಗುಡ್ಡಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net