

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ಊರಿಗಳತ್ತ ಮುಖ ಮಾಡಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ದೀಪಾವಳಿ ಹಬ್ಬ ಹಿನ್ನೆಲೆ ಸಾಲು ಸಾಲು ರಜೆಗಳು ಇದ್ದು, ಹಾಗಾಗಿ ಜನರು ತಮ್ಮ ತಮ್ಮ ಊರುಗಳತ್ತ ಹೊರಟ ನಿಂತಿದ್ದರೆ, ಇತ್ತ ಮಹಿಳೆಯರು ದೇವಸ್ಥಾನಗಳನ್ನು ನೋಡಲು ಹೊರಟಿದ್ದಾರೆ.
ಹಬ್ಬದ ಸಲುವಾಗಿ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶೃಂಗೇರಿ, ಹೊರನಾಡು, ಮಲೆಮಹದೇಶ್ವರ ಬೆಟ್ಟ, ಮೈಸೂರು ಮತ್ತು ಮಂಗಳೂರುಗಳತ್ತ ನಾರಿಯರು ಹೊರಟಿದ್ದು, ಎಲ್ಲಾ ಬಸ್‌ಗಳು ಫುಲ್ ರಶ್ ಆಗಿವೆ. ಈಗಾಗಲೇ ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮ ಬಸ್‌ಗಳಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಹಾಗಾಗಿ ಪ್ರವಾಸಿ ತಾಣಗಳಿಗೆ ರೌಂಡ್ ಹಾಕಲು ಮಹಿಳೆಯರು ಮುಂದಾಗಿದ್ದಾರೆ. ಹೀಗಾಗಿ ಬಹುತೇಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರೆ ತುಂಬಿಕೊಂಡಿದ್ದಾರೆ ಇದರಿಂದಾಗಿ ಬಸ್‌ಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ಪ್ರಯಾಣಿಕರ ಅಗತ್ಯಕ್ಕನುಗುಣವಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಅಧಿಕ ಟ್ರಿಪ್‌ಗಳ ಕಾರ್ಯಾಚರಣೆ ನಡೆಸುತ್ತಿದ್ದಾರೆ ಹೀಗಿದ್ದರೂ ಸಹ ನಗರದ ಮೆಜೆಸ್ಟಿಕ್, ಮೈಸೂರು ರಸ್ತೆಯ ಸ್ಯಾಟಿಲೈಟ್ ಮತ್ತು ಕೆಂಗೇರಿ ಸ್ಯಾಟಿಲೈಟ್, ಶಾಂತಿನಗರ ಮತ್ತು ಬನಶಂಕರಿ ಬಸ್‌ನಿಲ್ದಾಣಗಳಲ್ಲಿ ಹೆಚ್ಚಿನ ುಲ್ ರಶ್ ಉಂಟಾಗಿದೆ. ಬಸ್‌ಗಳನ್ನು ಹತ್ತಿ ಸೀಟ್‌ಗಳನ್ನು ಹಿಡಿಯಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ.
ದೇವಾಲಯಗಳ ಆದಾಯ ಹೆಚ್ಚಾಗುವ ನಿರೀಕ್ಷೆ:
ಕಳೆದ ದಸರಾ ಹಬ್ಬ ವೇಳೆ ರಾಜ್ಯದ ದೇವಾಲಯಗಳಲ್ಲಿ ನಿರೀಕ್ಷೆಗೂ ಮೀರಿ ಹುಂಡಿ ಹಣ ಸಂಗ್ರಹವಾಗಿತ್ತು. ಶಕ್ತಿ ಯೋಜನೆ ಜಾರಿಯಾದ ನಂತರ ದೇವಾಲಯಗಳಿಗೆ ಹೋಗುವ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇವಾಲಯಗಳಿಗೆ ಹೋಗುವ ಮಹಿಳೆಯರು ಹುಂಡಿಗಳಿಗೆ ತಮ್ಮ ಹರಕೆಯ ಹಣವನ್ನು ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯದ ಪುಣ್ಯಕ್ಷೇತ್ರದ ದೇವಾಲಯಗಳಲ್ಲಿ ಭಕ್ತರ ದಂಡು ಹೆಚ್ಚಾಗಿ ಭಕ್ತರು ಹಾಕುವ ಕಾಣಿಕೆ ಮತ್ತು ಹುಂಡಿಯ ಹಣದಲ್ಲಿಯೂ ಏರಿಕೆ ಕಂಡು ಬಂದಿದೆ.