ಕಂಪ್ಲಿ: ತಾಲೂಕಿನಲ್ಲಿ ಹಕ್ಕಿ-ಕೋಳಿ ಜ್ವರ ಬಾಧೆ ಇರದಿದ್ದರೂ ಜನ ಚಿಕನ್ ಸೇವಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಚಿಕನ್ ದರ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿದೆ.
ಕೋಳಿಫಾರ್ಮ ಮಾಲೀಕರಿಗೆ, ಚಿಕನ್, ಮೊಟ್ಟೆ ಮಾರಾಟಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ಜನರಿಗೆ ಜಾಗೃತಿ ಮೂಡಿಸುವಲ್ಲಿ ಮುಂದಾಗಿದ್ದಾರೆ. ಕಳೆದ ಮೂರ‌್ನಾಲ್ಕು ದಿನದಿಂದ ಚಿಕನ್ ದರ ಕೆಜಿಗೆ 240ರೂ.ಇಂದ 200 ರೂ.ಕುಸಿದಿದೆ. ಚಿಕನ್ ತಿನ್ನುವವರ ಸಂಖ್ಯೆಯೂ ಕಡಿಮೆಯಾಗಿದೆ. ತಾಲೂಕಿನಲ್ಲಿ ಹಕ್ಕಿಜ್ವರದ ಬಾಧೆ ಇಲ್ಲ. ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಕೋಳಿ ಫಾರ್ಮ್ ಮಾಲೀಕರು ಹೋಲ್‌ಸೇಲ್ ಕೊಳ್ಳುಗರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಮಾಹಿತಿ ತಿಳಿದ ಚಿಕನ್, ಮೊಟ್ಟೆ ಪ್ರಿಯರು ಸೇವಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ತಾಲೂಕಿನಲ್ಲಿ ಹಕ್ಕಿ, ಕೋಳಿ ಜ್ವರ ಬಾಧೆಯೇ ಇಲ್ಲ. ಕೋಳಿ ಫಾರ್ಮ್‌ನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕೋಳಿಗಳಿಗೆ ನಿತ್ಯ ವ್ಯಾಕ್ಸಿನ್ ಹಾಕಲಾಗುತ್ತಿದೆ. ಚಿಕನ್-ಮೊಟ್ಟೆ ಬೇಯಿಸುವುದರಿಂದ ಚಿಕನ್, ಮೊಟ್ಟೆಯಲ್ಲಿ ರೋಗಕಾರಕ ಅಂಶಗಳಿರುವುದಿಲ್ಲ ಎಂದು ಮಾರಾಟಗಾರರು ಕೊಳ್ಳುಗರಿಗೆ ತಿಳಿಸಿ ಮಾರುವ ಪ್ರಯತ್ನ ಮಾಡುತ್ತಿದ್ದೇವೆ. ರಂಜಾನ್ ಆರಂಭಗೊಂಡಿದ್ದು 2-3 ದಿನಗಳಲ್ಲಿ ಚಿಕನ್ ಬೇಡಿಕೆ ಮತ್ತು ದರ ಏರಿಕೆಗೊಳ್ಳಲಿದೆ ಎಂದು ಹೆಸರೇಳಲಿಚ್ಚಿಸದ ಚಿಕನ್ ಮಾರಾಟಗಾರರು ತಿಳಿಸಿದ್ದಾರೆ.
ಕಂಪ್ಲಿ ತಾಲೂಕಿನಲ್ಲಿ ಹಕ್ಕಿ-ಕೋಳಿ ಜ್ವರ ಬಾಧೆಯಿಲ್ಲ. ಚಿಕನ್, ಮೊಟ್ಟೆ ಬೇಯಿಸಿ ತಿನ್ನುವುದರಿಂದ ತೊಂದರೆಯಾಗುವುದಿಲ್ಲ. ಜನರು ತಪ್ಪು ತಿಳಿವಳಿಕೆಯಿಂದ ದೂರವಾಗಬೇಕು. ಹದಿನೈದು ದಿನಗಳತನಕ ಹೊಸದಾಗಿ ಕೋಳಿ ಸಾಕಣೆ ಮಾಡಬಾರದು. ಕೋಳಿಫಾರ್ಮ್‌ನಲ್ಲಿ ಕಟ್ಟುನಿಟ್ಟಾಗಿ ಜೈವಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಡಾ.ಕೆ.ಯು.ಬಸವರಾಜ ಪ್ರಭಾರ ಮುಖ್ಯ ಪಶು ವೈದ್ಯಾಧಿಕಾರಿ, ಕಂಪ್ಲಿ. ಕೋಳಿಜ್ವರ ಸಾಮಾನ್ಯವಾಗಿದ್ದು ಜನ ಅನಗತ್ಯ ಭಯದಿಂದ ಹೊರಬರಬೇಕಿದೆ. ಬೇಯಿಸಿದ ಚಿಕನ್, ಮೊಟ್ಟೆ ಸೇವನೆಯಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿತ್ಯದಂತೆ ಚಿಕನ್, ಮೊಟ್ಟೆ ಬಳಸಬೇಕು. ಕೋಳಿಫಾರ್ಮನಲ್ಲೂ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮರ್ತೂರು ಸುರೇಶ ಮೊಟ್ಟೆ ಮಾರಾಟಗಾರ, ಕಂಪ್ಲಿ.