ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಒಲವು

People have shown interest in celebrating eco-friendly Ganeshotsav
Published on

ಸದೇಶ್ ಕಾರ್ಮಾಡ್ ಮೈಸೂರು
ಜಲಮೂಲವನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶೋತ್ಸವ ಮೂರ್ತಿಗಳ ಹಾವ ಳಿಯ ನಡುವೆಯೂ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಜನರು ಒಲವು ತೋರುತ್ತಿದ್ದಾರೆ.

ನಗರ ಪಾಲಿಕೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಮೂಡಿಸಿದ ಅರಿವಿನ ಪರಿಣಾಮ ಜನರು ಮಣ್ಣಿನಿಂದ ತಯಾರಿಸಿದ ಗೌರಿ, ಗಣೇಶ ಉತ್ಸವ ಮೂರ್ತಿಗಳನ್ನು ಖರೀದಿಸಲು ಈ ಬಾರಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಪ್ರಕಾರ ಪಿಒಪಿ ಮೂರ್ತಿಗಳ ಬಳಕೆ ಶಿಕ್ಷಾರ್ಹ ಅಪರಾಧವಾಗಿದ್ದು, ತಯಾರಿಕೆ ಮಾಡುವವರಿಗೆ 1ಲಕ್ಷ ದಂಡ, 5 ವರ್ಷ ಜೈಲು ಶಿಕ್ಷೆ, ಮಾರಾಟ ಮತ್ತು ವಿಸರ್ಜನೆ ಮಾಡುವವರಿಗೆ 1 ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಕಠಿಣ ಕಾನೂನು ಇದ್ದರೂ ಪಿಒಪಿ ಮೂರ್ತಿಗಳ ಮಾರಾಟಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ನಗರದ ವಿವಿಧೆಡೆ ಕದ್ದುಮುಚ್ಚಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಕೆಲವು ವರ್ತಕರು ನಗರದ ಹೊರ ವಲಯದಲ್ಲಿ ಪಿಒಪಿ ಮೂರ್ತಿಗಳನ್ನು ದಾಸ್ತಾನು ಇಟ್ಟು ಜನರು ಕೇಳಿದ ಸಂದರ್ಭ ತಂದು ಮಾರಾಟ ಮಾಡುತ್ತಿದ್ದಾರೆ. ಪಿಒಪಿ ಮೂರ್ತಿಗಳ ಜತೆಗೆ ಪೇಪರ್ ಪಲ್ಪ್‌ನಿಂದ ತಯಾರಿಸಿದ ಮೂರ್ತಿಗಳು ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪೇಪರ್ ಪಲ್ಪ್ ಮೂರ್ತಿಗಳ ತಯಾರಿಕೆಗೆ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಅಂಶಗಳನ್ನು ಬಳಕೆ ಮಾಡಲಾಗುತ್ತದ್ದು, ಈ ರಾಸಾಯನಿಕಗಳು ಜಲಚರಗಳ ಜೀವಕ್ಕೆ ಕಂಟಕವಾಗಲಿದೆ.

ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಪರಿಸರಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದೆ. ನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಗಣೇಶೋತ್ಸವ ಮೂರ್ತಿ ಮಾರಾಟ ಮಾಡುವ ಪ್ರತಿಯೊಂದು ಸ್ಥಳಗಳಿಗೆ ಭೇಟಿ ನೀಡಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಮನೆ ಮನೆಗಳಲ್ಲಿ ಪೂಜಿಸುವ ಸಣ್ಣ ಗಾತ್ರದ ಗಣೇಶೋತ್ಸವ ಮೂರ್ತಿಗಳೆಲ್ಲವೂ ಮಣ್ಣಿನಿಂದ ತಯಾರಿಸಿದ ಮೂರ್ತಿಗಳಾಗಿವೆ. ಆದರೆ, ಬೃಹತ್ ಗಾತ್ರದ ಮೂರ್ತಿಗಳನ್ನು ಪಿಒಪಿಯಲ್ಲಿ ತಯಾರಿಸುತ್ತಿರುವುದು ಕಂಡು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕಾರ್ಯ ನಡೆಯಬೇಕಾಗಿದೆ.

ಮಕ್ಕಳು ತಯಾರಿಸಿದ ಮಣ್ಣಿನ ಗಣಪ: ಪರಿಸರ ಬಳಗ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಇತ್ತೀಚೆಗೆ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರವನ್ನು ಶಾಲಾ ಮಕ್ಕಳಿಗೆ ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು. ವಿಜಯನಗರ ಮೊದಲ ಹಂತದಲ್ಲಿರುವ ಯೋಗನರಸಿಂಹ ದೇವಸ್ಥಾನದ ಎದುರಿನ ಉದ್ಯಾನ ಹಾಗೂ ಲಲಿತ ಮಹಲ್ ಅರಮನೆ ಬಳಿಯ ಮೈದಾನದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ಪ್ರತಿ ದಿನ ಎರಡು ಬ್ಯಾಚಿನಂತೆ ಒಟ್ಟು ಎಂಟು ಬ್ಯಾಚುಗಳಿಗೆ (ತಂಡಗಳಿಗೆ) ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರದಲ್ಲಿ ಜೆಎಸ್‌ಎಸ್ ವಿದ್ಯಾ ಸಂಸ್ಥೆಗಳು, ಶಾಂತಲಾ ವಿದ್ಯಾಪೀಠ, ತಿರುಮಲ ಪಬ್ಲಿಕ್ ಸ್ಕೂಲ್, ಭಾರತೀಯ ವಿದ್ಯಾಭವನ ಶಾಲೆ, ಸಂಜೀವಯ್ಯ ಶಾಲೆ ಮುಂತಾದ ಶಾಲೆಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ನಡೆಸಿದ ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಲ್ಪ ಕಲೆಯಲ್ಲಿ ಪರಿಣತಿ ಮತ್ತು ಅನುಭವವಿರುವ ಶಿಲ್ಪಿಗಳಿಂದ ಮಣ್ಣಿನ ಗಣಪತಿ ಮಾಡುವುದನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. ಶಿಬಿರದಲ್ಲಿ ಭಾಗಿಯಾದ ಮಕ್ಕಳು ಮಣ್ಣಿನ ಗಣಪತಿಯನ್ನು ತಾವೇ ಸ್ವತಃ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಜೀವ ಗಣೇಶ ಮೂರ್ತಿ’ ತಯಾರಿಸಿದ ಮಕ್ಕಳು: ಶ್ರೀ ದುರ್ಗಾ ಫೌಂಡೇಷನ್ ವತಿಯಿಂದ ನಗರದ ಮಂಚೇಗೌಡನಕೊಪ್ಪಲು ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಜೇಡಿಮಣ್ಣಿನಿಂದ ‘ಪರಿಸರಸ್ನೇಹಿ ಜೀವ ಗಣೇಶ ಮೂರ್ತಿ’ ತಯಾರಿಸುವ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮದೇ ಆದಂತಹ ವಿಭಿನ್ನ ಶೈಲಿಯ ಗಣಪತಿ ಮೂರ್ತಿ ತಯಾರಿಸಿ ಸಂಭ್ರಮಿಸಿದರು. ಮೂರ್ತಿಯೊಳಗೆ ಬೀಜ ಇಟ್ಟು ಜೀವ ಗಣಪತಿ ತಯಾರಿಸಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು. ಈ ಮಣ್ಣಿನ ಮೂರ್ತಿಯನ್ನು ಪೂಜಿಸಿ ವಿಸರ್ಜಿಸಿದ ನಂತರ ಅದರಲ್ಲಿ ಉಳಿಯುವ ಬೀಜ ಮೊಳಕೆಯೊಡೆದು ಸಸಿಯಾಗಲಿದ್ದು, ಗಣೇಶ ಮೂರ್ತಿಯ ಮೂಲಕ ಹಲವು ಗಿಡಗಳು ಬೆಳೆಯಲಿದೆ.

ನಗರದ ಎಲ್ಲ ಗಣೇಶೋತ್ಸವ ಮೂರ್ತಿಗಳ ಮಾರಾಟಗಾರರ ಬಳಿ ತೆರಳಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಟ್ಟು ಎರಡು ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ. ಕೆಲವು ವರ್ತಕರು ರಹಸ್ಯ ಸ್ಥಳಗಳಲ್ಲಿ ಪಿಒಪಿ ಮೂರ್ತಿಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಕಂಡು ಬಂದರೆ ಸಾರ್ವಜನಿಕರು ನಗರ ಪಾಲಿಕೆಯ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಜನರು ಮಣ್ಣಿನಿಂದ ತಯಾರಿಸಿದ ಗಣೇಶೋತ್ಸವ ಮೂರ್ತಿಗಳನ್ನು ಮಾತ್ರ ಖರೀದಿಸಿ ಪೂಜಿಸುವ ನಮ್ಮ ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕು.
ಡಾ.ವೆಂಕಟೇಶ್, ಆರೋಗ್ಯಾಧಿಕಾರಿ, ನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net