ಜನರಿಗೆ ಉತ್ತಮ ಸೇವೆ ನೀಡೋಣ: ಕೊಪ್ಪಳ ನಿರ್ಗಮಿತ ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಹೇಳಿಕೆ

210722 Koppal DC Vikas Kishore couple honored by district administration
ನಿರ್ಗಮಿತ ಡಿಸಿ ವಿಕಾಸ್ ಕಿಶೋರ್ ದಂಪತಿಯನ್ನು ಜಿಲ್ಲಾಡಳಿತದಿಂದ ಬುಧವಾರ ಸನ್ಮಾನಿಸಲಾಯಿತು. ಡಿಸಿ ಸುಂದರೇಶ ಬಾಬು, ಎಡಿಸಿ ಎಂ.ಪಿ. ಮಾರುತಿ ಇದ್ದರು.
Published on

ಕೊಪ್ಪಳ: ನಮಗೆ ಇರುವ ಸಮಯದಲ್ಲೇ ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜನಸಾಮಾನ್ಯರಿಗೆ ನಿಗದಿತ ಅವಧಿಯೊಳಗೆ ಸೇವೆ ನೀಡಬೇಕು. ಇಲ್ಲಿಯ ತಂಡ ಉತ್ತಮವಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ನನಗೆ ತುಂಬ ಸಹಕಾರ ನೀಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದ ತೃಪ್ತಿ ನನಗಿದೆ. ಎಲ್ಲರ ಪರಿಶ್ರಮದಿಂದಲೇ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರಿದೆ ಎಂದರು.

ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿ, ಒಬ್ಬ ಅಧಿಕಾರಿಯಾಗಿ ಅಲ್ಲದೆ ಒಂದು ತಂಡವಾಗಿ ಹೇಗೆ ಕೆಲಸ ಮಾಡಿ ಯಶಸ್ಸು ಸಾಧಿಸಬಹುದೆಂದು ವಿಕಾಸ್ ಕಿಶೋರ್ ತಿಳಿಸಿಕೊಟ್ಟಿದ್ದಾರೆ. ಅವರ ಸ್ನೇಹಪರತೆ, ವೃತ್ತಿಪರತೆ, ದೃಢವಿಶ್ವಾಸ, ಕರ್ತವ್ಯ ನಿರ್ವಹಣೆ ಮತ್ತು ಸಾರ್ವಜನಿಕ ಸೇವಾ ಮನೋಭಾವ ಎಲ್ಲರಿಗೂ ಮಾದರಿ ಎಂದರು.

ಎಡಿಸಿ ಎಂ.ಪಿ.ಮಾರುತಿ ಮಾತನಾಡಿದರು. ವಿವಿಧ ಅಧಿಕಾರಿಗಳು ಅಭಿಪ್ರಾಯ ಹಂಚಿಕೊಂಡರು. ವಿವಿಧ ಇಲಾಖೆಗಳಿಂದ ವಿಕಾಸ್ ಕಿಶೋರ್ ದಂಪತಿಯನ್ನು ಸನ್ಮಾನಿಸಲಾಯಿತು. ಎಸಿ ಬಸವಣ್ಣಪ್ಪ ಕಲಶೆಟ್ಟಿ, ಡಿಯುಡಿಸಿ ಪಿಡಿ ಪ್ರಾಣೇಶ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ ಇತರರಿದ್ದರು.

ಡಿಸಿಯಾಗಿ ಬಹಳಷ್ಟು ಸೇವೆ ಮಾಡಲು ಅವಕಾಶಗಳಿವೆ. ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರ ಅಗತ್ಯ. ನಾವೆಲ್ಲರೂ ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ.| ಸುಂದರೇಶ ಬಾಬು, ಕೊಪ್ಪಳ ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net